ಪ್ರಶಸ್ತಿಯೊಂದಿಗೆ ಬಂದ 1 ಲಕ್ಷಕ್ಕೆ ಮತ್ತೆ ಒಂದು ಲಕ್ಷ ರು. ಹಣ ಸೇರಿಸಿ ಮಠಕ್ಕೆ ವಾಪಸ್ ನೀಡಿದ ಸಿದ್ದರಾಮಯ್ಯ
ಚಿತ್ರದುರ್ಗ: ಮಡಿವಾಳ ಗುರುಪೀಠದಲ್ಲಿ ಬಸವ ಮಾಚಿದೇವ ಸ್ವಾಮೀಜಿ ಅವರ ನಾಲ್ಕನೇ ಪೀಠಾರೋಹಣ ಹಾಗೂ 38ನೇ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಚಿದೇವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆದರೆ ಪ್ರಶಸ್ತಿಯೊಂದಿಗೆ ನೀಡಿದ್ದ ನಗದಿನೊಂದಿಗೆ ತಾವೇ 1 ಲಕ್ಷ ರೂ. ಸೇರಿಸಿ ಮಠಕ್ಕೆ ಹಿಂತಿರುಗಿಸಿದ್ದಾರೆ.
ಪ್ರಶಸ್ತಿಯು 1 ಲಕ್ಷ ನಗದು ಒಳಗೊಂಡಿರುವುದಾಗಿ ಶಾಸಕ ಭೀಮಾನಾಯ್ಕ ಗಮನಕ್ಕೆ ತಂದಿದ್ದಾರೆ. ಇದಕ್ಕೆ ವೈಯಕ್ತಿಕವಾಗಿ 1 ಲಕ್ಷ ಸೇರಿಸಿ ಮಠಕ್ಕೆ ಮರಳಿಸುತ್ತೇನೆ. ಮಠದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಇದನ್ನು ವಿನಿಯೋಗಿಸಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಇದಕ್ಕೆ ಸಂತಸದಿಂದ ಪ್ರತಿಕ್ರಿಯಿಸಿದ ಬಸವ ಮಾಚಿದೇವ ಸ್ವಾಮೀಜಿ, ಇದನ್ನು ಬಡಮಕ್ಕಳ ವಿದ್ಯಾನಿಧಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.
ಸ್ವಾಮೀಜಿಯವರು ನನ್ನನ್ನು ಭೇಟಿ ಮಾಡಿ ‘ಮಾಚಿದೇವ ಶ್ರೀ ಪ್ರಶಸ್ತಿ’ ಪ್ರದಾನ ಮಾಡುತ್ತೇವೆ. ನೀವು ಸ್ವೀಕರಿಸಬೇಕು” ಎಂದು ಮನವಿ ಮಾಡಿದ್ದರು. ಮೊದಲನೇ ಬಾರಿ ಕೊಡುತ್ತಿದ್ದೀರಿ, ನನಗಿಂತ ಸಾಧನೆ ಮಾಡಿದವರು ಇದ್ದಾರೆ. ಪ್ರದಾನ ಸಮಾರಂಭಕ್ಕೆ ನಾನು ಕೂಡಾ ಬರುತ್ತೇನೆ ಎಂದು ಹೇಳಿದೆ. ಸ್ವಾಮೀಜಿ ‘ಇಲ್ಲ, ನಿಮಗೆ ಕೊಡಬೇಕೆಂದು ತೀರ್ಮಾನಿಸಿದ್ದೇವೆ. ಸ್ವೀಕಾರ ಮಾಡಬೇಕು’ ಎಂದು ಹೇಳಿ ಒತ್ತಾಯ ಮಾಡಿದರು. ಅವರ ಒತ್ತಾಯಕ್ಕೆ ಮಣಿದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.