ಮಣಿಪಾಲ: ರೈಲಿನಲ್ಲಿ ಪ್ರಯಾಣಿಕರ ಬ್ಯಾಗ್ ಕಳವು
ಮಣಿಪಾಲ ಜ. 7(ಉಡುಪಿ ಟೈಮ್ಸ್ ವರದಿ): ಕುರ್ಲಾ–ಎರ್ನಾಕುಲಂ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ಕಳವಾಗಿರುವ ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಈ ಬಗ್ಗೆ ಪೊದಿಯಮ್ಮ ಡೆನಿಲ್ ಅವರು ಕೇರಳದ ಕಣ್ಣೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಕಾರಣ ಈ ಪ್ರಕರಣ ಮಣಿಪಾಲ ಠಾಣೆಗೆ ವರ್ಗಾವಣೆಗೊಂಡಿತ್ತು. ಅದರಂತೆ ಡಿ.15 ರಂದು ಪೊದಿಯಮ್ಮ ಡೆನಿಲ್ ಅವರು ತನ್ನ ಗಂಡ ಹಾಗೂ ಮಗನೊಂದಿಗೆ ಕುರ್ಲಾ– ಎರ್ನಾಕುಲಂ ನೇತ್ರಾವತಿ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಕಣ್ಣೂರಿನಿಂದ ಕಯಾಕುಲಂಗೆ ಪ್ರಯಾಣಿಸುತ್ತಿದ್ದರು. ಈ ರೈಲು 2021 ರ ಡಿ.16 ರಂದು ಮುಂಜಾನೆ 2.30 ರ ಸಮಯಕ್ಕೆ ಉಡುಪಿ ರೈಲ್ವೇ ನಿಲ್ದಾಣ ತಲುಪಿದಾಗ 30 ವರ್ಷ ಪ್ರಾಯದ ವ್ಯಕ್ತಿ ದೂರುದಾರರ ವ್ಯಾನಿಟಿ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ. ಕಳವಾದ ಬ್ಯಾಗ್ ನಲ್ಲಿ ಚಿನ್ಮಾಭರಣಗಳು, ಪ್ಲಾಟಿನಂ ಆಭರಣ, 2 ಮೊಬೈಲ್ ಫೋನ್, 15,000 ರೂ. ನಗದು ಸಹಿತ ಅಗತ್ಯ ದಾಖಲೆಗಳು ಇರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂ. ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.