ಉಡುಪಿ: ಬೂಟ್ ಪಾಲಿಷ್ ಮಾಡುವ ಮೂಲಕ ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು
ಉಡುಪಿ, ಜ.6(ಉಡುಪಿ ಟೈಮ್ಸ್ ವರದಿ): ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕ ಹಾಗೂ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಹುದ್ದೆ ಖಾಯಮಾತಿ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ಅತಿಥಿ ಉಪನ್ಯಾಸಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ಸೇರಿದ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ ನಾರಾಯಣ ಅವರ ಮುಖವಾಡ ತೊಟ್ಟು ಬೂಟ್ ಪಾಲಿಷ್ ಮಾಡುವ ಮೂಲಕ ಪ್ರತಿಭಟಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ, ಕಳೆದ ಹಲವು ವರ್ಷಗಳಿಂದ ಸೇವೆ ಅಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಕೆಲವು ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡದು ಮಾಡುವ ಸರಕಾರಕ್ಲೆ ಅತಿಥಿ ಉಪನ್ಯಾಸಕರ ಕಷ್ಟ ಯಾಕೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಯವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕ ಹಾಗೂ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ ಮನವಿಯಲ್ಲಿ ರಾಜ್ಯದ 430 ಸರಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸುವ ಸಲುವಾಗಿ ಕರ್ನಾಟಕ ನಾಗರಿಕ ಸೇವೆ ಮತ್ತು ನಿಯಮ 14ರ ಅಡಿಯಲ್ಲಿ ಪ್ರಥಮ ದರ್ಜೆ ಕಾಲೇಜುಗಳ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಉಳಿಸುವುದು ಮತ್ತು ನಿಯಮಬಾಹಿರ 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸೂಚನೆಯನ್ನು ತಡೆಹಿಡಿದು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸೇವಾ ವಿಲೀನ ವಿಚಾರವಾಗಿ 2021ರ ಆಗಸ್ಟ್ 23 ಮತ್ತು 2021 ರ ಸೆಪ್ಟೆಂಬರ್ 5ರಂದು ಕೈಗೊಂಡಿದ್ದ ನಿರ್ಣಯಗಳ ಕಡತವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ನ ಪ್ರಸ್ತುತ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಶಿಕ್ಷಕರ ಬೇಡಿಕೆಗಳು ಹಿಗಿವೆ ಕರ್ನಾಟಕ ನಾಗರಿಕ ಸೇವೆ ಮತ್ತು ನಿಯಮ 14 ಅಡಿ ನೇಮಕಾತಿ ನಿಯಮಗಳನ್ವಯ ತಾತ್ಕಾಲಿಕವಾಗಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಸೇವೆಯನ್ನು ವಿಲೀನಗೊಳಿಸುವುದು. ಈ ವಿಚಾರವನ್ನು ವಿಧಾನಮಂಡಲ ಮತ್ತು ವಿಧಾನಪರಿಷತ್ ನಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಅತಿಥಿ ಉಪನ್ಯಾಸಕರ ಸೇವಾ ವಿಲೀನ ಪ್ರಕ್ರಿಯೆ ಪೂರ್ಣ ಗೊಳ್ಳುವವರೆಗೆ 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ಹಿಡಿಯಬೇಕು.