ವಿಕೇಂಡ್ ಕರ್ಫ್ಯೂ: ರಾಜ್ಯಾದ್ಯಂತ ಬಾರ್, ಪಬ್, ಹೋಟೆಲ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ ಮುಚ್ಚಲು ಆದೇಶ
ಬೆಂಗಳೂರು: ರಾಜ್ಯದ ಅನೇಕ ಕಡೆಗಳಲ್ಲಿ ಕೋವಿಡ್-19 ಒಮಿಕಾನ್ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಬಾರ್, ಪಬ್, ಹೋಟೆಲ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್‌ಗಳನ್ನು ವಿಕೇಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜ.7 ಶುಕ್ರವಾರ ರಾತ್ರಿ 10 ಗಂಟೆಯಿಂದ ಜ.10 ಸೋಮವಾರ ಬೆಳಿಗ್ಗೆ 5 ಗಂಟೆಗಳ ವರೆಗೆ ಮುಚ್ಚಬೇಕೆಂದು ಆದೇಶಿಸಿದೆ.
ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಿಸಿದ ಕಾರಣ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮುಂದಿನ ಎರಡು ವಾರಾಂತ್ಯಗಳಲ್ಲಿ ಮೆಟ್ರೋ ಕಾರ್ಯಾಚರಣೆಗಳ ಸಮಯ ಮತ್ತು ರೈಲುಗಳ ಸಂಚಾರವನ್ನು ಕಡಿಮೆ ಮಾಡಲಿದೆ.
ಮೆಟ್ರೋ ಪ್ರಯಾಣಿಕರ ಮೂಲಕ ಕೋವಿಡ್-19 ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೇವಲ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರವಲ್ಲದೆ ರೈಲುಗಳಲ್ಲಿಯೂ ಮಾಸ್ಕ್‌ಗಳನ್ನು ಸರಿಯಾಗಿ ಧರಿಸದ ಪ್ರಯಾಣಿಕರ ತಪಾಸಣೆಯನ್ನು ಹೋಮ್ ಗಾರ್ಡ್ ನೊಂದಿಗೆ ಜನವರಿ 3 ರಿಂದ ತೀವ್ರಗೊಳಿಸಲಾಗಿದೆ.
ಶನಿವಾರ ಮತ್ತು ಭಾನುವಾರದಂದು ಮೆಟ್ರೋ ರೈಲಿನ ಸಮಯವನ್ನು ಪರಿಷ್ಕರಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. “ಈ ದಿನಗಳಲ್ಲಿ ನಾಗಸಂದ್ರ, ಸಿಲ್ಕ್ ಇನ್‌ಸ್ಟಿಟ್ಯೂಟ್, ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 8 ಗಂಟೆಗೆ ಮೆಟ್ರೋ ರೈಲು ಸೇವೆಗಳು ಪ್ರಾರಂಭವಾಗುತ್ತವೆ ಮತ್ತು ರಾತ್ರಿ 9 ರವರೆಗೆ 20 ನಿಮಿಷಕ್ಕೆ ಒಂದು ರೈಲಿನ ಸಂಚಾರವಿರಲಿದೆ. ಎಲ್ಲಾ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 9 ಗಂಟೆಗೆ ಕೊನೆಯ ರೈಲು ಇರುತ್ತದೆ. ಕರ್ಫ್ಯೂ ಜಾರಿಯಲ್ಲಿರುವವರೆಗೂ ಇದು ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ.
ಸೋಮವಾರದಿಂದ ಗುರುವಾರದವರೆಗೆ, ಕಾರ್ಯಾಚರಣೆಗಳು ಸಾಮಾನ್ಯವಾಗಿರುತ್ತವೆ . ಶುಕ್ರವಾರದಂದು, ರೈಲು ಸೇವೆಗಳನ್ನು ರಾತ್ರಿ 11 ರ ಬದಲಿಗೆ ರಾತ್ರಿ 10 ಗಂಟೆಗೆ ಒಂದು ಗಂಟೆ ಮುಂಚಿತವಾಗಿ ಮುಚ್ಚಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಸ್ಕ್‌ಗಳನ್ನು ಸರಿಯಾಗಿ ಧರಿಸದಿರುವ ಪ್ರಯಾಣಿಕರ ತಪಾಸಣೆ ಕಾರ್ಯವನ್ನು ಹೆಚ್ಚಿನ ಗೃಹ ರಕ್ಷಕರ ನಿಯೋಜನೆ ಮೂಲಕ ತೀವ್ರಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದರು. ಹಿಂದೆ, ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ನಿಯಮ ಉಲ್ಲಂಘಿಸುವವರಿಗೆ ತಪಾಸಣೆ ಮತ್ತು ದಂಡವನ್ನು ವಿಧಿಸಲಾಗುತ್ತಿತ್ತು. ಈಗ ರೈಲುಗಳ ಬೋಗಿಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.