ಹೃದಯಾಘಾತದಿಂದ ಹೆಡ್ ಕಾನ್ ಸ್ಟೇಬಲ್ ನಿಧನ
ಮೂಡುಬಿದಿರೆ, ಜ.5: ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ (35) ಮೃತಪಟ್ಟವರು.
ತೀರ್ಥಹಳ್ಳಿಗೆ ತೆರಳಿದ್ದ ಇವರಿಗೆ ಮಂಗಳವಾರ ರಾತ್ರಿ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹೆಡ್ ಕಾನ್ ಸ್ಟೇಬಲ್ ಸಂತೋಷ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು” ಪೊಲೀಸ್ ಕುಟುಂಬದ ಕಿರಿಯ ಸದಸ್ಯರೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಂತೋಷ್ ಅವರು ಕೊನೆಯುಸಿರೆಳೆದಿದ್ದು, ಅವರ ಆತ್ಮಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡು ಅಗಲಿದ ಪೊಲೀಸ್ ಸಿಬ್ಬಂದಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ.