| ಕಾಪು ಜ.5(ಉಡುಪಿ ಟೈಮ್ಸ್ ವರದಿ): ಕಾಪು-ಪೊಲಿಪು ಕ್ರಾಸ್ ನಲ್ಲಿ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಸಹ ಸವಾರ ಮೃತಪಟ್ಟಿದ್ದಾರೆ.
ಪೊಲಿಪು ನಿವಾಸಿ ಪ್ರಸಾದ್ ಪೂಜಾರಿ ಮೃತಪಟ್ಟವರು. ಜ.3 ರಂದು ಮಧ್ಯಾಹ್ನದ ವೇಳೆ ಸ್ನೇಹಿತ ಸಂತೋಷ್ ಶಟ್ಟಿ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರನ್ನೂ ಪುರಸಭೆಯ ಮಾಜಿ ಸದಸ್ಯೆ ಅಶ್ವಿನಿ ಅವರ ಸಹಕಾರದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಸಾದ್ ಪೂಜಾರಿ(32) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದ ಪ್ರಸಾದ್ ಅವರು ಕೋವಿಡ್ ಕಾರಣದಿಂದ ಒಂದೂವರೆ ವರ್ಷದ ಹಿಂದೆ ಊರಿಗೆ ಬಂದಿದ್ದರು. ಮನೆಯಲ್ಲಿ ಕೃಷಿಯ ಜೊತೆಗೆ ವಿವಿಧೆಡೆ ಕೆಲಸ ನಡೆಸುತ್ತಿದ್ದ ಅವರು ಮುಂದಿನ ತಿಂಗಳು ಮತ್ತೆ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಪುರಸಭಾ ಮಾಜಿ ಸದಸ್ಯೆ ಅಶ್ವಿನಿ ನೀಡಿದ ಮಾಹಿತಿಯಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | |