ಅಕ್ಷಯ ಆರ್. ಶೆಟ್ಟಿ ಅವರ ದೆಂಗ ತುಳು ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ
ಉಡುಪಿ: ತುಳುಕೂಟ ಉಡುಪಿ ವತಿಯಿಂದ ನೀಡಲಾಗುವ 2020-2021 ನೇ ಸಾಲಿನ ಪ್ರತಿಷ್ಠಿತ ಎಸ್. ಯು. ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಪೆರಾರ ಮುಂಡಬೆಟ್ಟುಗುತ್ತು ಅಕ್ಷಯ ಆರ್.ಶೆಟ್ಟಿ ಅವರ ದೆಂಗ ಕಾದಂಬರಿ ಆಯ್ಕೆಯಾಗಿದೆ.
ತುಳು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ದಿ.ಎಸ್.ಯು.ಪಣಿಯಾಡಿ ಅವರು ಸ್ವಾತಂತ್ರ್ಯ ಹೋರಾಟಗಾರ ರಾಗಿಯೂ ಗುರುತಿಸಿಕೊಂಡವರು. ಇವರ ಸವಿನೆನಪಿಗಾಗಿ ಉಡುಪಿ ತುಳುಕೂಟವು ಕಳೆದ 27 ವರ್ಷಗಳಿಂದ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಕೃತಿ ಬಿಡುಗಡೆ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಈ ಮೂಲಕ ತುಳು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಯುವ ಕಾದಂಬರಿಕಾರರನ್ನು ಪರಿಚಯಿಸಲಾಗಿದೆ. ಮಾತ್ರವಲ್ಲದೆ ಪ್ರಶಸ್ತಿ ವಿಜೇತ 33 ತುಳು ಕಾದಂಬರಿಗಳನ್ನು ಉಡುಪಿ ತುಳುಕೂಟ ಪ್ರಕಟಿಸುವ ಮೂಲಕ ತುಳು ಭಾಷಾ ಕೃತಿಗಳ ಬೆಳೆವಣಿಗೆಗೆ ವಿಶೇಷ ಕೊಡುಗೆ ನೀಡಿದೆ.
ತುಳುಕೂಟ ಉಡುಪಿ ಇದರ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೂತನ ದೆಂಗ ತುಳು ಕಾದಂಬರಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಕಾದಂಬರಿ ಸ್ಪರ್ಧೆಗೆ ವಿವಿದೆಢೆಗಳಿಂದ ಒಟ್ಟು ಏಳು ಹಸ್ತಪ್ರತಿಗಳು ಬಂದಿದ್ದು, ಸ್ಪರ್ಧೆಯ ತೀರ್ಪುಗಾರರಾಗಿ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಜಾನಕಿ ಬ್ರಹ್ಮಾವರ, ಸಕು ಪಾಂಗಾಳ, ಉಪನ್ಯಾಸಕಿ ಡಾ.ನಿಕೇತನ ಸಹಕರಿಸಿದ್ದರು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾದಂಬರಿ ಪ್ರಶಸ್ತಿ ಸಂಚಾಲಕಿ ತಾರಾ ಉಮೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.