ಉಡುಪಿ: 15-18 ವರ್ಷದವರೆಗಿನ ಮಕ್ಕಳಿಗೂ ಕೋವಿಡ್ 19 ಲಸಿಕಾ ಕಾರ್ಯಕ್ರಮ ಪ್ರಾರಂಭ
ಉಡುಪಿ ಜ.3(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ 15 ರಿಂದ 18 ವರ್ಷದ ವರೆಗಿನ ಎಲ್ಲಾ ಮಕ್ಕಳಿಗೂ ಕೋವಿಡ್ 19 ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಿದ್ದು, ಇಂದಿನಿಂದ 15 ರಿಂದ18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು.
ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ ಅವರು ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ 15ನೇ ವರ್ಷದಿಂದ 18 ವರ್ಷದವರೆಗಿನ ಮಕ್ಕಳಿಗೆ ಲಸಿಕೆ ನೀಡಲು 53555 ಗುರಿಯನ್ನು ನಿಗದಿಪಡಿಸಲಾಗಿದ್ದು, ಲಸಿಕೆ ವಿತರಣೆಗಾಗಿ ಜಿಲ್ಲೆಯಲ್ಲಿ – 309 ಹೈಸ್ಕೂಲ್, 104 ಪದವಿ ಪೂರ್ವ ಕಾಲೇಜು, 21 ಐ.ಟಿ.ಐ ಇತ್ಯಾದಿ ಸಂಸ್ಥೆಗಳನ್ನು ಸೇರಿ ಒಟ್ಟು 434 ಕೇಂದ್ರಗಳನ್ನು ಗುರುತಿಸಲಾಗಿದೆ. 2007ನೇ ಇಸವಿಯಲ್ಲಿ ಜನಿಸಿರುವ ಮತ್ತು 2007ರ ಇಸವಿಗೂ ಮುನ್ನ ಜನಿಸಿರುವ ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅರ್ಹರಾಗಿದ್ದು, ಮಕ್ಕಳು ಕಲಿಯುತ್ತಿರುವ ಹೈಸ್ಕೂಲ್ /ಕಾಲೇಜು/ಶೈಕ್ಷಣಿಕ ಸಂಸ್ಥೆಗಳಲ್ಲಿ ಲಸಿಕಾ ಶಿಬಿರಗಳನ್ನು ಏರ್ಪಡಿಸಿ ಅರ್ಹ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು. ಹಾಗೂ ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ 15ನೇ ವರ್ಷದಿಂದ 18 ವರ್ಷದವರೆಗಿನ ಮಕ್ಕಳಿಗೆ ಅವರು ವಾಸಿಸುವ ಸ್ಥಳದ ಹತ್ತಿರದ ಶಿಕ್ಷಣ ಸಂಸ್ಥೆಯ ಲಸಿಕಾ ಶಿಬಿರದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಮಕ್ಕಳು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಅವರ ಆಧಾರ್ ಕಾರ್ಡ್/ ರೇಷನ್ ಕಾರ್ಡ್ ಅಗತ್ಯವಿದ್ದು ಪೋಷಕರು ಮಕ್ಕಳ ಆಧಾರ್ ಕಾರ್ಡ್/ ರೇಷನ್ ಕಾರ್ಡ್ ಮತ್ತು ಪೋಷಕರ ಮೊಬೈಲ್ ಸಂಖ್ಯೆ ನೀಡಿ ಸಹಕರಿಸಬೇಕು ಮತ್ತು ಮಕ್ಕಳಿಗೆ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ಫಲಾನುಭವಿ ಮಕ್ಕಳು ಸ್ವಂತ ಮೊಬೈಲ್ ಸಂಖ್ಯೆ ಬಳಸಿ ಅಥವಾ ಕೋವಿನ್ ಪೋರ್ಟಲ್‌ನಲ್ಲಿ ಈಗಾಗಲೇ ಇರುವ ತಂದೆತಾಯಿಗಳ/ಪೋಷಕರ ಅಕೌಂಟ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಒಂದು ವೇಳೆ ಇದು ಯಾವುದೂ ಲಭ್ಯವಿಲ್ಲದಿದ್ದರೆ ಶಾಲೆಯ ಮಖ್ಯೋಪಾಧ್ಯಾಯರ/ಶಿಕ್ಷಕರ ಮೊಬೈಲ್ ಸಂಖ್ಯೆ ಮೂಲಕ ಲಸಿಕಾ ಶಿಬಿರದಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ/ಕಾಲೇಜು/ತರಬೇತಿ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಯವರನ್ನು ನೇಮಿಸಲಾಗಿದೆ. ಮಕ್ಕಳಿಗೆ ಅಥವಾ ಪೋಷಕರಿಗೆ ಲಸಿಕಾಕರಣದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿಯವರನ್ನು/ ಮುಖ್ಯಸ್ಥರನ್ನು ಅಥವಾ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರನ್ನು ಸಂಪರ್ಕಿಸಬಹುದು.
ಲಸಿಕಾ ಶಿಬಿರ ದಿನಾಂಕದಂದು ಪೋಷಕರು ಲಸಿಕಾ ಶಿಬಿರ ಜರುಗುವ ಶಿಕ್ಷಣ ಸಂಸ್ಥೆಗಳಲ್ಲಿ ಉಪಸ್ಥಿತರಿದ್ದು, ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಇನ್ನು ಈ ಲಸಿಕಾ ಅಭಿಯಾನದ ಯಶಸ್ವಿಯಾಗಿ ಡಿ.29 ರಂದು ಎಲ್ಲಾ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಅಧೀನ ಸಂಸ್ಥೆಯ ಮುಖ್ಯೋಪಾಧ್ಯಾಯರಿಗೆ, ಪ್ರಾಂಶುಪಾಲರಿಗೆ ತರಬೇತಿಯನ್ನು ನೀಡಲಾಗಿದೆ. ಲಸಿಕೆ ಪಡೆಯುವ ಬಗ್ಗೆ ಜನಜಾಗೃತಿ ಮಾಡಿಸಲು ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಆರೋಗ್ಯ ಇಲಾಖೆಯಿಂದ ವಿವಿಧ ಫೋನ್ ಇನ್ ಕಾರ್ಯಕ್ರಮಗಳು, ಟಿ.ವಿ. ಲೈವ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಟಿ.ವಿ ಸ್ಕ್ರೋಲಿಂಗ್ ನೀಡಲಾಗಿದೆ. ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹಾಗೂ 60 ವರ್ಷ ಮೇಲ್ಪಟ್ಟ ಕೋಮಾರ್ಬಿಡ್ ಇರುವವರಿಗೆ ಮುಂಜಾಗ್ರತಾ ಡೋಸ್ ಕೋವಿಡ್ ಲಸಿಕೆ ನೀಡುವ ಬಗ್ಗೆ ಕೇಂದ್ರದ ಮಾರ್ಗಸೂಚಿ ಬಂದ ತಕ್ಷಣ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.