ಉಡುಪಿ: ಎಚ್ಚರ ತಪ್ಪಿದಲ್ಲಿ ಸಮುದಾಯ ಮಟ್ಟಕ್ಕೆ ಸೋಂಕು ಡಾ.ಶಶಿಕಿರಣ್ ‌

ಉಡುಪಿ: ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಹಾಗೂ ಶೀತಜ್ವರ ರೋಗ ಲಕ್ಷಣ ಇರುವವರರಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಮುದಾಯ ಮಟ್ಟದಲ್ಲಿ ಸೋಂಕು ಹರಡಿರುವ ಭೀತಿ ಸೃಷ್ಟಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಸಾಧ್ಯತೆ ಎಂದು ಡಾ.ಟಿಎಂಎ ಪೈ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.

ಐಸಿಯು, ವೆಂಟಿಲೇಟರ್‌ಗಳಿಗೆ ಬೇಡಿಕೆ: ಪ್ರಾಂಭದಲ್ಲಿ ಶೇ 98ರಷ್ಟು ಸೋಂಕಿತರಿಗೆ ರೋಗ ಲಕ್ಷಣಗಳು ಇರಲಿಲ್ಲ. ಹಾಗಾಗಿ, ಐಸಿಯು, ವೆಂಟಿಲೇಟರ್‌, ಹೈಫ್ಲೋ ಆಮ್ಲಜನಕ ಪೂರೈಕೆ ಬೆಡ್‌ಗಳ ಅವಶ್ಯಕತೆ ಇರಲಿಲ್ಲ. ಈಗ ಪರಿಸ್ಥಿತಿ ಭಿನ್ನವಾಗಿದ್ದು, ಶೇ 50ರಷ್ಟು ಸೋಂಕಿತರಲ್ಲಿ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಹಲವರಿಗೆ ಚಿಕಿತ್ಸೆಗೆ ಐಸಿಯು, ವೆಂಟಿಲೇಟರ್‌ಗಳ ಅಗತ್ಯತೆ ಕಂಡುಬರುತ್ತಿದೆ.

ಈಗಾಗಲೇ, ಕೋವಿಡ್‌ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್‌, ಐಸಿಯು ಬೆಡ್‌ಗಳು ಭರ್ತಿಯಾಗುತ್ತಿದ್ದು, ಪರಿಸ್ಥಿತಿ ಕೈಮೀರಿದರೆ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ ತಜ್ಞ ವೈದ್ಯರು.

ಸಾರ್ವಜನಿಕರು ಏನು ಮಾಡಬೇಕು?
: ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡುತ್ತಿರುವ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಮುಖ್ಯವಾಗಿ ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳಬೇಕು ಎನ್ನುತ್ತಾರೆ ಡಾ.ಟಿಎಂಎ ಪೈ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶಶಿಕಿರಣ್ ಉಮಾಕಾಂತ್.


‘ಮನೆಯಲ್ಲಿಯೇ ಇರಿ, ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಿ, ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಆರಂಭದಿಂದಲೂ ಹೇಳುತ್ತಿದ್ದೇವೆ. ಈಗ ಈ ನಾಲ್ಕು ಸೂತ್ರಗಳ ಜತೆಗೆ ಕಡ್ಡಾಯವಾಗಿ ಇತರೆ ಸುರಕ್ಷತಾ ಕ್ರಮಗಳನ್ನು ಸಾರ್ವಜನಿಕರು ಪಾಲಿಸಬೇಕು’ ಎಂದಿದ್ದಾರೆ.

ಮನೆಯೊಳಗೂ ಧರಿಸಿ ಮಾಸ್ಕ್‌: ಕೆಮ್ಮು, ಶೀತ–ಜ್ವರದ ಲಕ್ಷಣಗಳಿದ್ದರೆ ಮನೆಯೊಳಗೂ ಮಾಸ್ಕ್ ಧರಿಸಬೇಕು. ಕುಟುಂಬ ಸದಸ್ಯರೊಟ್ಟಿಗೆ ಕುಳಿತು ಊಟ ಮಾಡುವುಡು ಬೇಡ, ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಿ.
ರೋಗ ಗುಣವಾಗುವವರೆಗೂ ಪ್ರತ್ಯೇಕವಾಗಿದ್ದರೆ ಒಳಿತು. ಮನೆಯೊಳಗಿದ್ದುಕೊಂಡು ಅಂತರ ಕಾಯ್ದುಕೊಳ್ಳುವುದು ಕಷ್ಟವಾ
ದರೂ, ಕುಟುಂಬ ಸದಸ್ಯರ, ಹಿರಿಯರ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪಾಲಿಸಲೇಬೇಕು ಎನ್ನುತ್ತಾರೆ ಡಾ.ಶಶಿಕಿರಣ್‌.

ಮಾಸ್ಕ್‌ ಹೇಗೆ ಧರಿಸಬೇಕು: ಮನೆಯಿಂದ ಮಾಸ್ಕ್ ಧರಿಸಿ ಬರುವವರು ಮಾರುಕಟ್ಟೆಗೆ ಬಂದ ಕೂಡಲೇ ಗಡ್ಡ ಅಥವಾ ಕುತ್ತಿಗೆಗೆ ಜಾರಿಸುತ್ತಾರೆ. ಈ ಅಭ್ಯಾಸ ಬಹಳ ಅಪಾಯಕಾರಿ. ನಮಗೆ ಅರಿವಿಲ್ಲದಂತೆ ಸೋಂಕಿತರ ಜತೆ ಮಾತನಾಡುವಾಗ ಗಡ್ಡ ಹಾಗೂ ಕುತ್ತಿಗೆಯ ಭಾಗದ ಮೇಲೆ ವೈರಸ್‌ಗಳು ಬಂದು ಕೂರುತ್ತವೆ. ಮಾಸ್ಕ್‌ನ ಒಳಮುಖಕ್ಕೆ ಅಂಟಿಕೊಳ್ಳುವ ವೈರಸ್‌ ನೇರವಾಗಿ
ಬಾಯಿಯ ಮೂಲಕ ದೇಹ ಪ್ರವೇಶಿಸುತ್ತವೆ. ಹಾಗಾಗಿ, ಮಾಸ್ಕ್‌ ಮುಖದ ಮೇಲೆಯೇ ಇರಲಿ.

ಅನವಶ್ಯಕ ತಿರುಗಾಟ ಬೇಡ: ಮನೆಗೆ ಆಹಾರ ಪದಾರ್ಥಗಳನ್ನು ತರುವಾಗ ಒಬ್ಬರೆ ಹೋದರೆ ಒಳಿತು. ಹಾಗೆಯೇ ಪ್ರತಿದಿನ ಹೋಗಬೇಕಿಲ್ಲ. ವಾರಕ್ಕೆ ಅಥವಾ 15 ದಿನಗಳಿಗಾಗುವಷ್ಟು ತಂದಿಟ್ಟುಕೊಂಡರೆ ಸೋಂಕು ತಗುಲುವ ಅಪಾಯ ಕಡಿಮೆ ಎನ್ನುತ್ತಾರೆ ಡಾ.ಶಶಿಕಿರಣ್‌.

‘ಭಯ ಬೇಡ; ಜಾಗ್ರತೆ ಇರಲಿ’

‘ಸೋಂಕಿನಿಂದ ಗುಣಮುಖರಾದ ಶೇ 90ರಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಳ್ಳುತ್ತಿದ್ದು, ಕೊರೊನಾ ಸೋಂಕಿನ ಬಗ್ಗೆ ಭಯ ಬೇಡ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಇದು ಒಳ್ಳೆಯ ಪ್ರಯತ್ನವಾದರೂ, ಸಮಾಜ ಈ ಸಂದೇಶವನ್ನು ಸ್ವೀಕರಿಸುತ್ತಿರುವ ರೀತಿ ಆತಂಕ ಮೂಡಿಸುತ್ತಿದೆ. ಕೊರೊನಾ ಸೋಂಕು ಬಂದರೆ ಏನೂ ಆಗುವುದಿಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಅಡ್ಡಾಡುತ್ತಿದ್ದಾರೆ. ತಮಗೆ ಅರಿವಿಲ್ಲದಂತೆ ಸೋಂಕನ್ನು ಸಮುದಾಯಕ್ಕೆ ಹಬ್ಬಿಸುತ್ತಿದ್ದಾರೆ. ಇದು ಬಹಳ ಆತಂಕಕಾರಿ ವಿಚಾರ’ ಎನ್ನುತ್ತಾರೆ ಡಾ.ಶಶಿಕಿರಣ್ ಉಮಾಕಾಂತ್‌. 

Leave a Reply

Your email address will not be published. Required fields are marked *

error: Content is protected !!