ಕರ್ನಾಟಕದಲ್ಲಿ ಕೊರೋನಾ, ಓಮಿಕ್ರಾನ್ ಹೆಚ್ಚಳ: ನಾಳೆ ತಜ್ಞರ ಜೊತೆ ಸಿಎಂ ಸಭೆ- ಕಠಿಣ ಕ್ರಮ ಜಾರಿ?

ಬೆಂಗಳೂರು: ಅಕ್ಕಪಕ್ಕ ರಾಜ್ಯಗಳಲ್ಲಿ ಹಾಗೂ ಕರ್ನಾಟಕಲ್ಲಿ ಕಳೆದೊಂದು ವಾರದಲ್ಲಿ ಕೋವಿಡ್-19 ಹಾಗೂ ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ತಜ್ಞರ ಜೊತೆ ಚರ್ಚೆಯ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ನಾಳೆ ಸಂಜೆ ತಜ್ಞರ ಜೊತೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ನಾಳೆ ಸಂಜೆ ತಜ್ಞರ ಜೊತೆ ಸಭೆ, ಗುರುವಾರ ಸಂಪುಟ ಸಭೆ: ಬೆಂಗಳೂರಿನಲ್ಲಿಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಲವು ಕ್ರಮಗಳ ಅಗತ್ಯವನ್ನು ಮನಗಂಡು ತಜ್ಞರ ಜೊತೆ ಮಾತುಕತೆ, ಚರ್ಚೆ ನಡೆಸುತ್ತೇವೆ.ಅವರು ನೀಡಿದ ಸಲಹೆಗಳ ಆಧಾರದ ಮೇಲೆ ಗುರುವಾರ ಸಂಪುಟ ಸಹೋದ್ಯೋಗಿಗಳ ಜೊತೆ ಸಚಿವ ಸಂಪುಟ ನಡೆಸಿ ಚರ್ಚಿಸುತ್ತೇನೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಒಟ್ಟಾರೆ ಸ್ಥಿತಿಗತಿ, ತೆಗೆದುಕೊಳ್ಳಬೇಕಾದ ದೀರ್ಘಾವಧಿ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಈ ಹಿಂದೆ ಕೋವಿಡ್ ಮೊದಲ ಮತ್ತು ಎರಡನೇ ಅಲೆ ಬಂದು ಲಾಕ್ ಡೌನ್ ಮಾಡಿ ಆದ ಅನುಭವಗಳು, ಆರೋಗ್ಯ ವ್ಯವಸ್ಥೆ, ಕೋವಿಡ್ ಮುನ್ನೆಚ್ಚರಿಕೆ ಯಾವ ರೀತಿ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಮತ್ತು ಜನತೆಗೆ ಸಹ ಗೊತ್ತಾಗಿದೆ. ಈ ಸಂದರ್ಭದಲ್ಲಿ ಜನರು ಸ್ವ ನಿರ್ಬಂಧ ಹಾಕಿಕೊಳ್ಳಲೇಬೇಕು. ಸ್ವಯಂ ನಿಯಂತ್ರಣ ಮಾಡಿಕೊಂಡು ಆರೋಗ್ಯ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕಷ್ಟವಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಓಮಿಕ್ರಾನ್ ಸೋಂಕಿನ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿಗೆ ತರುವ ಸುಳಿವನ್ನು ಸಿಎಂ ನೀಡಿದ್ದಾರೆ.

ಇಂದು ರಾಜ್ಯಾದ್ಯಂತ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡುತ್ತಿದ್ದೇನೆ. ಯುವಜನತೆಯನ್ನು ಕೊರೋನಾ ಸುರಕ್ಷಾ ಚಕ್ರದ ಒಳಗೆ ತರಬೇಕು ಎಂಬುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕೆ ಶಿಕ್ಷಕರು, ಪೋಷಕರು, ಮಕ್ಕಳು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!