ಹಿಂದೂ ದೇವಾಲಯಗಳ ಸ್ವತಂತ್ರ: ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾದ ಭೀಕರ ಹುನ್ನಾರ- ಸಿದ್ದರಾಮಯ್ಯ

ಬೆಂಗಳೂರು: ‘ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ, ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾದ ಭೀಕರ ಹುನ್ನಾರ. ಶೇ 80ರಷ್ಟು ಹಿಂದೂಗಳ ಆಸ್ತಿ ಕಬಳಿಸಿ ಶೇ 2–3ರಷ್ಟಿರುವ ಜನರ ಅಧೀನಕ್ಕೆ ಪಡೆಯುವ ತಂತ್ರ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.


ಮಾಧ್ಯಮ ಹೇಳಿಕೆಯಲ್ಲಿ ಅವರು, ‘ಒಂದು ವರ್ಗದ ದುಷ್ಟ ಕಣ್ಣು ದೇಗುಲಗಳ ಮೇಲೆ ಬಿದ್ದಿದೆ. ಸರ್ಕಾರ ಇದಕ್ಕೆ ಮುಂದಾದರೆ, ನಾಡಿನ ಸಾವಿರ ವರ್ಷಗಳ ಜನರ ದೀರ್ಘ ಹೋರಾಟವನ್ನು ಅವಮಾನಿಸಿದಂತಾಗುತ್ತದೆ’ ಎಂದಿದ್ದಾರೆ. ಈ ಹಿಂದೂ ವಿರೋಧಿ, ಧಾರ್ಮಿಕ ಬಂಡವಾಳವಾದಿ ಪರ ಧೋರಣೆಯನ್ನು ಬುದ್ಧಿ, ಪ್ರಜ್ಞೆ ಇರುವ ಎಲ್ಲರೂ ವಿರೋಧಿಸಬೇಕು. ಬಿಜೆಪಿಯ ಮೂಲಭೂತ ಸ್ವಭಾವದಲ್ಲಿ ಸಾಮಾಜಿಕ ನ್ಯಾಯವನ್ನು ತುಳಿದು, ಶೂದ್ರರು, ದಲಿತರು, ಮಹಿಳೆಯರನ್ನು ಗುಲಾಮಗಿರಿಗೆ ತಳ್ಳುವ ನೀಚ ಕಾರ್ಯಸೂಚಿಯಿದೆ. ಅದಕ್ಕೆ ಸಂಬಂಧಿಸಿದ ಕಾಯ್ದೆಗಳನ್ನು ಬಿಜೆಪಿಯವರು ರೂಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುವ ನಿರ್ಧಾರದ ಮೂಲಕ ಬಹುಸಂಖ್ಯಾತ ಹಿಂದೂ ಸಮಾಜದ ಮೇಲೆ ಬಿಜೆಪಿ ಸಾರಿರುವ ಸಮರದ ವಿರುದ್ಧ ಜಯಗಳಿಸಲು ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ, ಪ್ರತಿಭಟಿಸಬೇಕು’ ಎಂದಿದ್ದಾರೆ. ಒಂದು ಸಾವಿರ ವರ್ಷಗಳಿಂದ ನಮ್ಮ ಹಿರಿಯರು ನಡೆಸಿದ ಹೋರಾಟದಿಂದಾಗಿ ಮನುವಾದಿ ವಿಷವೃಕ್ಷದ ಬೇರುಗಳು ದುರ್ಬಲವಾಗಿ, ಶಿಥಿಲಾವಸ್ಥೆಗೆ ತಲುಪಿದ್ದವು. ಬಿಜೆಪಿ ಸರ್ಕಾರ ದೇವಸ್ಥಾನಗಳಿಗೆ ಸ್ವಾಯತ್ತತೆ ಮೂಲಕ ಒಣಗುತ್ತಿದ್ದ ಬೇರುಗಳಿಗೆ ಟಾನಿಕ್‌ ನೀಡಲು ಹೊರಟಿದೆ. ಮನುವಾದಿ ಸಿದ್ಧಾಂತ ಮತ್ತೆ ಜೀವ ಪಡೆದರೆ ಅದು ರಾಕ್ಷಸ ರೂಪಿಯಾಗುತ್ತದೆ. ಇದನ್ನು ವಿರುದ್ಧ ಪಕ್ಷಾತೀತ, ಪಂಥಾತೀತವಾಗಿ ವಿರೋಧಿಸಬೇಕಿದೆ‘ ಎಂದಿದ್ದಾರೆ.

‘ದೇವಸ್ಥಾನಗಳ ಮೇಲಿನ ಹಿಡಿತ ತಪ್ಪಿಸುವುದೆಂದರೆ ಜನ ಸಮುದಾಯಗಳ ಅಧಿಕಾರ ತಪ್ಪಿಸುವುದೆಂದೇ ಅರ್ಥ. ಸರ್ಕಾರ ಈಗಿನ ನಿರ್ಧಾರದ ಮೂಲಕ ಶೇ 80ರಷ್ಟು ಜನ ಮತ್ತೆ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಅನುಭವಿಸಬೇಕೆಂದು ತೀರ್ಮಾನಿಸಿದಂತೆ ಕಾಣುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪುರೋಹಿತಶಾಹಿ ಶಕ್ತಿಗಳು, ಬಿಜೆಪಿಯಲ್ಲಿರುವ ಶೂದ್ರ ರಾಜಕಾರಣಿಗಳನ್ನು ಬಳಸಿಕೊಂಡು ದೇಗುಲಗಳನ್ನು ತಮ್ಮ ವಶಕ್ಕೆ ಪಡೆದು ಹಿಂದೂಗಳನ್ನು ಧಾರ್ಮಿಕ ಗುಲಾಮಗಿರಿಯ ಕಡೆಗೆ ತಳ್ಳಲು ಪ್ರಯತ್ನಿಸುತ್ತಿವೆ’ ಎಂದೂ ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!