ಕೊಲ್ಲೂರು: ಕೊಡಚಾದ್ರಿಯ ಚಿಮ್ಮುವ ಜಲಪಾತದಲ್ಲಿ ಎಳ್ಳಅಮಾವಾಸ್ಯೆ ತೀರ್ಥಸ್ನಾನ
ಕುಂದಾಪುರ: ಕೊಲ್ಲೂರಿನ ಕೊಡಚಾದ್ರಿಯಿಂದ ಚಿಮ್ಮುವ ಜಲಪಾತ ( ಬೆಳ್ಕಲ್ ತೀರ್ಥ) ದುರ್ಗಮ ಕಾಡಿನ ಮಧ್ಯ ಕಂಗೊಳಿಸುತ್ತಿದೆ. ಈ ಜಲಪಾತದಲ್ಲಿ ಪ್ರತಿವರ್ಷ ಎಳ್ಳುಅಮಾವಾಸ್ಯೆಯ ದಿನ ತೀರ್ಥಸ್ನಾನ ಮಾಡಲು ಸಾವಿರಾರು ಜನರು ಬರುತ್ತಾರೆ. ಅಂತೆಯೇ ಜ.2 ಭಾನುವಾರ ಬೆಳಿಗ್ಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡಿ ಪುನೀತರಾದರು.
ಕಠಿಣ ಮಾರ್ಗದ ನಡುವೆ ಪಯಣ: ಕುಂದಾಪುರದಿಂದ 50 ಕಿ.ಮೀ.ಗೂ ಅಧಿಕ ದೂರವಿರುವ ಈ ಬೆಳ್ಕಲ್ ಚಾರಣ ಕೊಲ್ಲೂರು ಮಾರ್ಗದಲ್ಲಿ ಜಡ್ಕಲ್‌ನಿಂದ ಪೂರ್ವಾಭಿಮುಖವಾಗಿ ಮುದೂರು ಮಾರ್ಗದಲ್ಲಿ ಸಾಗಿದಾಗ ದಟ್ಟ ಕಾನನದ ಮಧ್ಯ ಇರುವ ಈ ನೈಸರ್ಗಿಕ ಸೊಬಗು ಚಾರಣ ಪ್ರಿಯರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಆದರೆ ಈ ತೀರ್ಥದ ಬಳಿ ತೆರಳುವುದು ಮಾತ್ರ ಸುಲಭ ಸಾಧ್ಯವಲ್ಲ, ಇಲ್ಲಿಗೆ ಸಾಗಬೇಕಾದರೆ ಕಾಲು ದಾರಿಯಲ್ಲಿ ಸುಮಾರು 5 ಕಿ.ಮೀ. ಕಾಡಿನಲ್ಲಿ ಗುಡ್ಡ, ಬಂಡೆಗಳ ನಡುವೆ ಸುಮಾರು ಒಂದು ಗಂಟೆ ಕಾಲ್ನಡಿಗೆಯ ಮೂಲಕ ತೀರ್ಥದ ಬಳಿ ತಲುಪಬೇಕಾಗಿದೆ.
ಕಾರಣೀಕ ಸ್ಥಳ: ಈ ಬೆಳ್ಕಲ್ ತೀರ್ಥ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುತ್ತಿದ್ದು ಇದು ಕಾರಣೀಕ ಸ್ಥಳವಾಗಿದೆ. ಈ ತೀರ್ಥದಿಂದ 5 ಕಿ.ಮೀ ಹಿಂದೆ ವಿಶ್ವಂಭರ ಮಹಾಗಣಪತಿ ಗೋವಿಂದ ಮತ್ತು ಕೋಟಿಲಿಂಗೇಶ್ವರ ದೇಗುಲವಿದೆ. ಎಳ್ಳಮಾವಾಸ್ಯೆಯ ದಿನದ ತೀರ್ಥಸ್ನಾನದ ಬಳಿಕ ಈ ದೇವಾಲಯದಲ್ಲಿಯೂ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬರುವ ಭಕ್ತರಿಗಾಗಿ ಇಲ್ಲಿ ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ತೀರ್ಥ ಸ್ನಾನದ ಮಹಿಮೆ: ಈ ಬೆಳ್ಕಲ್ ತೀರ್ಥವು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಎಳ್ಳಮಾವಾಸ್ಯೆಯ ದಿನದಂದು ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಅದರಂತೆ ಸಾವಿರಾರು ಭಕ್ತರು ಎಳ್ಳಮಾವಾಸ್ಯೆಯ ದಿನ ಎತ್ತರದಿಂದ ಧುಮುಕುತ್ತಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಾರೆ. ಆದರೇ ಮೇಲಿನಿಂದ ಕೆಳಕ್ಕೆ ಧುಮುಕುವ ತೀರ್ಥ ಕೆಳಗಡೆ ಇರುವ ಎಲ್ಲರ ಮೇಲೆ ತೀರ್ಥ ಬೀಳುತ್ತದೆ ಎಂದು ಹೇಳಲಾಗದು ಕೆಲವೊಮ್ಮೆ ಅದು ತನ್ನ ಪಥವನ್ನು ಬದಲಾಯಿಸುತ್ತದೆ ಎನ್ನುವುದು ಒಂದೆಡೆಯಾದರೇ ಹಾಗೂ ಧುಮುಕುವ ನೀರಿನ್ನು ಆಸ್ವಾದಿಸುತ್ತಾ ಭಕ್ತಿ ಭಾವದೊಂದಿಗೆ ಜನರು ಪುಳಕಿತರಾಗುತ್ತಾರೆ. ಈ ವೇಳೆ ಗೋವಿಂದ ನಾಮಾವಳಿ ನೆರೆದ ಭಕ್ತಸಾಗರವನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಕೇಮಾರು ಶ್ರೀಗಳ ಭೇಟಿ: ಕಾರಣಿಕವಾದ ಈ ಸ್ಥಳ ಯಾವುದೇ ಕಾರಣಕ್ಕೂ ಭಕ್ತರ ಸಂಪರ್ಕದಿಂದ ದೂರವಾಗದೇ ಆಗಮಿಸುವ ಭಕ್ತರಿಗೆ ಸಮಸ್ಯೆಯಾಗಬಾರದು ಎಂದು ಕೇಮಾರು ಸಾಂಧೀಪನಿ ಮಠದ ಶ್ರೀಗಳು ಹಾಗೂ ಕೊಡಾಚಾದ್ರಿ ಪರಿಸರ ಸಂರಕ್ಷಣ ಟ್ರಸ್ಟ್ ಗೌರವಾಧ್ಯಕ್ಷರಾದ ಈಶ ವಿಠ್ಠಲದಾಸ ಸ್ವಾಮೀಜಿ ನುಡಿದರು. ಭಾನುವಾರ ಗೋವಿಂದ ತೀರ್ಥದಲ್ಲಿ ಪವಿತ್ರ ತೀರ್ಥಸ್ನಾನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊಡಚಾದ್ರಿ 64 ತೀರ್ಥದಲ್ಲಿ ಗೋವಿಂದ ತೀರ್ಥ ಒಂದಾಗಿದ್ದು ಅತೀ ಎತ್ತರದಿಂದ ಬೀಳುವ ಪವಿತ್ರ ತೀರ್ಥದ ತಾಣಕ್ಕೆ ಬಹಳಷ್ಟು ಇತಿಹಾಸವಿದೆ. ಇಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವ ನಂಬಿಕೆಯಲ್ಲಿ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸುವ ಸಂಕಲ್ಪ ಮಾಡುತ್ತಾರೆ. ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಿರ್ಮಿಸಿ ಸುಂಕ ವಸೂಲಿ ಮಾಡುತ್ತಿರುವುದು ಬೇಸರದ ಸಂಗತಿ. ನಮ್ಮ ಪವಿತ್ರ ತೀರ್ಥ ಕ್ಷೇತ್ರ, ಪುಣ್ಯ ಕ್ಷೇತ್ರಗಳಿಗೆ, ದೇವಸ್ಥಾನಗಳಿಗೆ ತೆರಳಲು ಸುಂಕ ಕಟ್ಟುವ ಸಂಗತಿ ದೂರಾಗಬೇಕು. ಬಡ ಭಕ್ತರಿಗೆ ಸಮಸ್ಯೆಯಾಗುವ ಈ ವ್ಯವಸ್ಥೆಯನ್ನು ಸರಿಪಡಿಸಲು ಸರಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಶ್ರೀಗಳು ಆಗ್ರಹಿಸಿದರು. ಆಗಮಿಸುವ ಭಕ್ತರಿಗೆ ಸುಂಕ ರಹಿತ ವ್ಯವಸ್ತೆಗೆ ಕೊಡಾಚಾದ್ರಿ ಪರಿಸರ ಸಂರಕ್ಷಣ ಟ್ರಸ್ಟ್ ಕೂಡ ಆಗ್ರಹಿಸುತ್ತದೆ ಎಂದರು.
ಸಹಸ್ರಾರು ಭಕ್ತರಿಂದ ತೀರ್ಥಸ್ನಾನ: ಭಾನುವಾರದ ರಜಾ ದಿನವಾದ್ದರಿಂದ ನಸುಕಿನಂದಲೇ ಭಕ್ತರು ಗೋವಿಂದ ತೀರ್ಥಕ್ಕೆ ಆಗಮಿಸಿ ಅಲ್ಲಿ ಪವಿತ್ರ ತೀರ್ಥ ಸ್ನಾನ ಮಾಡಿ ಬೆಳ್ಕಲ್ ಕೋಟಿಲಿಂಗೇಶ್ವರ ದೇವಸ್ಥಾನ ದರ್ಶನ ಪಡೆದು ಪುನೀತರಾದರು. ಭಾನುವಾರ ದಿನವಿಡೀ ಸಹಸ್ರಾರು ಭಕ್ತರು ಇಲ್ಲಿಗೆ ಆಗಮಿಸಿದ್ದರು. ಪೋಷಕರೊಡನೆ ಬಂದಿದ್ದ ನೇರಳಕಟ್ಟೆ ನಿವಾಸಿ 5 ನೇ ತರಗತಿ ವಿದ್ಯಾರ್ಥಿ ಸುಹಾನ್ ಗೋವಿಂದ ನಾಮಾವಳಿ ನೆರೆದ ಭಕ್ತರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸಿತು. ವಿ.ಹಿಂ.ಪ ಮತ್ತು ಭಜರಂಗದಳ ಬೆಳ್ಕಲ್-ಮುದೂರು ಘಟಕದಿಂದ ಬಂದ ಭಕ್ತಾಧಿಗಳಿಗೆ ಮಜ್ಜಿಗೆ ವಿತರಣೆ ನಡೆಯಿತು. ಅಲ್ಲದೇ ಸ್ವಚ್ಚತೆಗೆ ಒತ್ತು ನೀಡುವ ಹಿನ್ನೆಲೆ ತೀರ್ಥಕ್ಕೆ ಸಾಗುವ ದಾರಿ ಮದ್ಯೆ ಹಲವೆಡೆ ಕಸದ ಬುಟ್ಟಿಗಳನ್ನು ಇಡಲಾಗಿತ್ತು.
ಕೇಮಾರು ಸಾಂಧೀಪನಿ ಮಠದ ಶ್ರೀಗಳು ಹಾಗೂ ಕೊಡಾಚಾದ್ರಿ ಪರಿಸರ ಸಂರಕ್ಷಣ ಟ್ರಸ್ಟ್ ಗೌರವಾಧ್ಯಕ್ಷರಾದ ಈಶ ವಿಠ್ಠಲದಾಸ ಸ್ವಾಮೀಜಿ, ಟ್ರಸ್ಟಿ ಕುಮಾರಸ್ವಾಮೀ, ಜಡ್ಕಲ್ ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಸದಸ್ಯರಾದ ಸೂಲ್ಯ ಬೋವಿ, ಸವಿತಾ ನಾಯ್ಕ್, ಮುದೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಜಯ್ ಶಾಸ್ತ್ರೀ, ವಿಶ್ವ ಹಿಂದೂ ಪರಿಷತ್ ಬೈಂದೂರು ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಮುದೂರು, ವಿ.ಹಿಂ.ಪ ಬೆಳ್ಕಲ್ ಘಟಕಾಧ್ಯಕ್ಚ ಶಶಿಧರ್ ಭಟ್, ಪ್ರಮುಖರಾದ ಉದಯ್ ಬೋವಿ, ರಾಘವೇಂದ್ರ ಡಿ., ಸ್ಥಳೀಯರಾದ ಸುವರ್ಣ ಕುಮಾರ್, ಮಂಜುನಾಥ ಬಿ.ಎಲ್, ಪ್ರವೀಣ್, ಜಯೇಶ್, ವೇಣುಗೋಪಾಲ ಹಾಗೂ ಬೆಳ್ಕಲ್ ಸ್ಥಳೀಯರು ಇದ್ದರು.