| ಉಡುಪಿ ಜ.1(ಉಡುಪಿ ಟೈಮ್ಸ್ ವರದಿ): ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರ ಹಾಕಿರುವ ಪ್ರಾಂಶುಪಾಲರ ನಡೆಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರು ಖಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನಮ್ಮ ನೆಲದಲ್ಲಿ ಇಂತಹ ನಿಯಮಗಳಿಲ್ಲ. ಯಾರನ್ನೋ ಖುಷಿ ಪಡಿಸಲು ಹೋದ ಕಾಲೇಜಿನ ಪ್ರಿನ್ಸಿಪಾಲ್ ವರ್ತನೆ ಸಮಾಜಕ್ಕೆ ಕೆಟ್ಟ ಸಂದೇಶ ಬೀರುವ ರೀತಿಯಲ್ಲಿದೆ. ಇದು ನಿಜಕ್ಕೂ ಖಂಡನೀಯ. ಶಾಂತಿಗೆ ಸಂದೇಶ ನೀಡುವ ಉಡುಪಿಯಲ್ಲಿ ಇಂತಹ ಘಟನೆ ಬಹಳ ನೋವು ತರುವಂತದ್ದು. ಹಾಗೂ ಇದು ವಿದ್ಯಾರ್ಥಿಗಳ ಮೇಲೆ ನಕರಾತ್ಮಕ ಪರಿಣಾಮ ಬೀರುವಂತದ್ದಾಗಿದ್ದು. ಹಾಗಾಗಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಪ್ರಿನ್ಸಿಪಲ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಲಾ ಕಾಲೇಜುಗಳು ಅದರಲ್ಲೂ ಸರಕಾರಿ ಶಾಲಾ ಕಾಲೇಜುಗಳು ಧರ್ಮ ಸಾಮಾರಸ್ಯ, ಸೌಹಾರ್ಧತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿ ಹೇಳುವಂತಹ ವ್ಯವಸ್ಥೆ ಇರಬೇಕು. ಆದರೆ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಉಡುಪಿ ನಗರದ ಸರಕಾರಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರ ಹಾಕಿರುವುದು ಎಲ್ಲರನ್ನೂ ತಲೆತಗ್ಗಿಸುವಂತೆ ಮಾಡಿದೆ.
ಶಾಂತಿ, ಸೌಹಾರ್ಧತೆಯ ಪಾಠ ಮಾಡಬೇಕಾದ ಗುರುಗಳೇ ಇಲ್ಲಿ ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗುವಂತೆ ವರ್ತಿಸಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ವಿದ್ಯಾರ್ಜನೆಗೆ ಬರುತ್ತಾರೆ. ಅವರಲ್ಲಿ ಯಾವುದೇ ಧಾರ್ಮಿಕ ಭೇಧ ಭಾವ ಇರುವುದಿಲ್ಲ. ಈ ಸೌಹಾರ್ದತಾ ಭಾವನೆಯನ್ನು ಉಪನ್ಯಾಸಕರು ಹೆಚ್ಚಾಗುವಂತೆ ಮಾಡಬೇಕೆ ವಿನಃ ಧರ್ಮದ ಬಗೆಗೆ ವಿದ್ಯಾರ್ಥಿಗಳು ತಪ್ಪು ಭಾವನೆ ಬರುಂತೆ ವರ್ತಿಸಬಾರದು. ಆಯಾ ಧರ್ಮಗಳಿಗೆ ಅದರದ್ದೇ ಅಚಾರ ವಿಚಾರ, ಸಂಸ್ಕೃತಿ ,ಪದ್ದತಿ ಇರುತ್ತದೆ.
ಹಿಜಾಬ್ ಧರಿಸುವುದು ಮುಸ್ಲಿಂ ಧರ್ಮದ ಒಂದು ಬಹು ಮುಖ್ಯವಾದ ಸಂಸ್ಕೃತಿಯಾಗಿದೆ. ಹೀಗಿರುವಾಗ ಯಾರೊಬ್ಬರ ಸಂಸ್ಕೃತಿಯನ್ನು ಪಾಲನೆ ಮಾಡುವುದನ್ನು ವಿರೋಧಿಸುವುದು ಸರಿಯಾದ ಕ್ರಮವಲ್ಲ. ಯಾಕೆಂದರೆ ಸಂವಿಧಾನದಲ್ಲಿಯೇ ಧಾರ್ಮಿಕ ಸ್ವಾತಂತ್ರ್ಯ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ನಿನ್ನೆ ನಡೆದ ಘಟನೆ ವಿದ್ಯಾರ್ಥಿಗಳ ಮನಸಲ್ಲಿ ಅನ್ಯ ಧರ್ಮದ ಬಗೆಗೆ ತಪ್ಪು ಭಾವನೆ ಮೂಡುವಂತೆ ಪ್ರೇರೆಪಿಸಲೂಬಹುದು. ಅವರಿಗೆ ಇರುವ ಸ್ವಾತಂತ್ರ್ಯ ನಮಗೆ ಏಕೆ ಇಲ್ಲ ಎಂಬ ಭಾವನೆಯೂ ಮೂಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. | |