ಗಂಡು ಮಗು ಹುಟ್ಟಿದರೆ ಮಾತ್ರ ಸಂತೋಷ ಪಡಬೇಕೇ ಈಶ್ವರಪ್ಪನವರೇ?- ಮಹಿಳಾ ಕಾಂಗ್ರೆಸ್ ಪ್ರೆಶ್ನೆ
ಉಡುಪಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಪಕ್ಷದ ನಾಯಕರ ಸಂತೋಷವನ್ನು 25ವರ್ಷಗಳ ನಂತರ ಗಂಡು ಮಗು ಹುಟ್ಟಿದ ಸಂತೋಷಕ್ಕೆ ಹೋಲಿಸಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ .ಎಸ್ ಈಶ್ವರಪ್ಪನವರ ಮನಸ್ಥಿತಿ ಬಹಳ ಅಪಾಯಕಾರಿಯಾಗಿದೆ.
ಒಬ್ಬ ಸಚಿವನಾಗಿ ಗಂಡು ಹಾಗೂ ಹೆಣ್ಣಿನ ಬಗ್ಗೆ ಅವರಲ್ಲಿರುವ ತಾರತಮ್ಯ ಹೇಸಿಗೆ ಹುಟ್ಟಿಸುತ್ತಿದೆ. ಗಂಡು ಮಗು ಹುಟ್ಟಿದರೆ ಮಾತ್ರ ಸಂತೋಷ ಪಡಬೇಕೇ ? ಹೆಣ್ಣು ಮಗು ಹುಟ್ಟಿದರೆ ಸಂತೋಷ ಪಡಬಾರದೆಂದಿದೆಯೇ .ಇದು ಯಾವ ರೀತಿಯ ಮನೋಸ್ಥಿತಿ ತಮ್ಮದು ಈಶ್ವರಪ್ಪನವರೇ? ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಮಕ್ಕಳಿಲ್ಲದ ದಂಪತಿಗಳಿಗೆ 25ವರ್ಷಗಳ ಬಳಿಕ ಮಗು ಹುಟ್ಟಿದಷ್ಟು ಸಂತೋಷವಾಗಿದೆ ಅಂದರೆ ಒಪ್ಪಬಹುದಿತ್ತು.ಅದು ಬಿಟ್ಟು ಈ ರೀತಿಯ ಬಾಲಿಶ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ.ಹಿಂದೊಮ್ಮೆ ತೃತೀಯ ಲಿಂಗಿಗಳ ಬಗ್ಗೆ ಅರ್ಥವಿಲ್ಲದ ಹೇಳಿಕೆ ನೀಡಿ ತಮ್ಮ ಅರೆ ಜ್ಞಾನವನ್ನು ಪ್ರದರ್ಶಿಸಿದ್ದ ಈಶ್ವರಪ್ಪ ಅವರು ಪುನಃ ಅದೇ ರೀತಿಯ ತಪ್ಪನ್ನು ಮಾಡುತ್ತಾ ಇದ್ದಾರೆ. ತಮ್ಮ ತಂದೆ ತಾಯಿಗಳಿಗೆ ಮಗು ಹುಟ್ಟಿದಾಗ ಅದು ಹೆಣ್ಣಿರಲಿ, ಗಂಡಿರಲಿ ಸಂತೋಷವಾಗುವುದು ಸ್ವಾಭಾವಿಕ. ಹೀಗಿರುವಾಗ ಈ ಸಂತೋಷ ಕೇವಲ ಗಂಡು ಮಕ್ಕಳು ಹುಟ್ಟಿದಾಗ ಎನ್ನುವ ಅರ್ಥ ಬರುವಂತೆ ಹೇಳಿಕೆ ನೀಡಿರುವುದು ಹೆಣ್ಣಿನ ಬಗ್ಗೆ ಅವರಿಗಿರುವ ತಾತ್ಸಾರ ಮನೋಭಾವನೆಯನ್ನು ತೋರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರ ನಾಲಿಗೆಗೆ ಲಗಾಮು ಇಲ್ಲದಂತಾಗಿದೆ. ದಿನಕ್ಕೊಬ್ಬರಂತೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.ಮುಖ್ಯಮಂತ್ರಿಗಳು ಸಂಪುಟದ ಮೇಲೆ ಹಿಡಿತ ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಹೇಳಿದ್ದಾರೆ.