ಕುಂದಾಪುರ: ಅಡವಿಟ್ಟ ಜಮೀನು ಬದಲು ಅಂಗಡಿ ಮುಟ್ಟುಗೋಲು ಹಾಕಿದ ಬ್ಯಾಂಕ್- ಅಪಾರ ನಷ್ಟ ಅನುಭವಿಸಿದ ಮಾಲಕ!
ಉಡುಪಿ ಜ.1(ಉಡುಪಿ ಟೈಮ್ಸ್ ವರದಿ): ಕುಂದಾಪುರದ ಕೆನರಾ ಬ್ಯಾಂಕ್ ನ ಅಚಾತುರ್ಯದಿಂದ ಸೀಝ್ ಆಗಬೇಕಿದ್ದ ಖಾಲಿ ಜಾಗದ ಬದಲು ಕೋರ್ಟ್ ನಲ್ಲಿ ಪ್ರಕರಣ ಚಾಲ್ತಿಯಲ್ಲಿದ್ದ ಅಂಗಡಿಯನ್ನು ಸೀಝ್ ಮಾಡಿರುವ ಘಟನೆ ಕುಂದಾಪುರದ ಆಲೂರಿನಲ್ಲಿ ನಡೆದಿದೆ.
ಕುಂದಾಪುರದ ಕೆನಾರ ಬ್ಯಾಂಕಿನ ಕಣ್ತಪ್ಪಿನಿಂದ ಇದೀಗ ಅಂಗಡಿ ಮಾಲಕರ ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ. ಈ ಅಚಾತುರ್ಯ ತಮ್ಮ ಕಣ್ತಪ್ಪಿನಿಂದಲೇ ಆಗಿದ್ದಾಗಿ ಬ್ಯಾಂಕಿನವರೂ ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದು ಇದೀಗ ಇಂದು ಬ್ಯಾಂಕ್ ನ ಮ್ಯಾನೆಜರ್ ಸ್ಥಳಕ್ಕೆ ಬಂದು ಅಂಗಡಿಯ ಸೀಝ್ ತೆರವುಗೊಳಿಸಿ ಮಾಲಿಕರಿಗೆ ಅಂಗಡಿಯ ಕೀಯನ್ನು ಹಸ್ತಾಂತ ಮಾಡಿದ್ದಾರೆ.
ಆದರೆ ಬ್ಯಾಂಕ್ ನವರು ಯಾವುದೇ ಸೂಚನೆ ನೀಡದೆ ಅಂಗಡಿ ಮುಚ್ಚಿದ್ದರು.ಅಲ್ಲದೆ ಈ ವೇಳೆ ಅಂಗಡಿ ಸಾಮಾನುಗಳನ್ನು ತೆರವುಗೊಳಿಸುವುದಾಗಿ ಸೂಚನೆ ನೀಡಿದರೂ ಅದಕ್ಕೆ ಅವಕಾಶ ನೀಡದೇ ಅಂಗಡಿ ಸೀಝ್ ಮಾಡಿದ ಕಾರಣ ಅಂಗಡಿ ಒಳಗಿದ್ದ ಅಪಾರ ಪ್ರಮಾಣದ ವಸ್ತುಗಳು ನಿರುಪಯುಕ್ತವಾಗಿದ್ದು ಇದರಿಂದ ತುಂಬಾ ನಷ್ಟವಾಗಿದೆ ಎಂದು ಅಂಗಡಿ ಮಾಲಕ ನಾಗರಾಜ್ ಹೇಳಿದ್ದಾರೆ.
ಈ ಬಗ್ಗೆ ಕಟ್ಟಡದ ಮಾಲಕರಾದ ಗುರುಪ್ರಸಾದ್ ಅವರು ಮಾತನಾಡಿ,ತಾವ ಕುಂದಾಪುರದ ಕೆನರಾ ಬ್ಯಾಂಕಿನಲ್ಲಿ ಶಾರದಾ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸಾಲ ಪಡೆದಿದ್ದು ಈ ಸಾಲ ತೀರಿಸಲಾಗದೇ ಇದ್ದಾಗ. ಈ ವಿಚಾರ ಕೋರ್ಟ್ ಮೆಟ್ಟಲೇರಿತ್ತು. ಆದರೆ ಬ್ಯಾಂಕ್ ನವರ ಕಣ್ತಪ್ಪಿನಿಂದಾಗಿ ಎಲ0 ಆಗಬೇಕಿದ್ದ ಆಸ್ತಿಯ ಸರ್ವೆ ನಂಬರ್ ನ ಬದಲಾಗಿ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿ ಇರುವ ಆಸ್ತಿಯ ಸರ್ವೇ ನಂಬರ್ ನೀಡಿ ಆಸ್ತಿಯ ಮುಟ್ಟುಗೋಲು ಹಾಕಿದ್ದರು. ಇದರಿಂದ ಅಪಾರ ನಷ್ಟವಾಗಿತ್ತು ಎಂದು ತಿಳಿಸಿದ್ದಾರೆ.