ಜವಳಿ ಮೇಲಿನ ಜಿಎಸ್ಟಿ ಹೆಚ್ಚಳ ಪ್ರಕ್ರಿಯೆ ಕೇಂದ್ರ ಸರಕಾರ ಮುಂದೂಡಿಕೆ

ಹೊಸದಿಲ್ಲಿ ಡಿ.31: ಜವಳಿ ಮೇಲಿನ ಜಿ ಎಸ್ ಟಿ ಹೆಚ್ಚಳ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಮುಂದೂಡಿರುವುದಾಗಿ  ರಾಷ್ಟ್ರೀಯ ಸುದ್ದಿಮಾಧ್ಯಮವೊಂದು ವರದಿ ಮಾಡಿದೆ.

ಜವಳಿ ಮೇಲಿನ ಸರಕು ಹಾಗೂ ಸೇವಾ ತೆರಿಗೆ(ಜಿಎಸ್ ಟಿ) ಯನ್ನು ಶೇ.5 ರಿಂದ 12ರ ವರೆಗೆ ಹೆಚ್ಚಿಸುವ ನಿರ್ಧಾರಕ್ಕೆ ಹಲವು ರಾಜ್ಯಗಳು, ಉದ್ಯಮಗಳು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆಯಲ್ಲಿ ಜಿಎಸ್ ಟಿ ಹೆಚ್ಚಳ ಪ್ರಕ್ರಿಯೆನ್ನು ಮುಂದೂಡಲಾಗಿದೆ ತಿಳಿಸಲಾಗಿದೆ.

ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವ ಅಮಿತ್ ಮಿತ್ರಾ ಅವರು ಕೇಂದ್ರ ಹಣಕಾಸು ಸಚಿವರನ್ನು ಜವಳಿ ಮೇಲಿನ ತೆರಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.  ಇದು ಸುಮಾರು ಒಂದು ಲಕ್ಷ ಜವಳಿ ಘಟಕಗಳನ್ನು ಮುಚ್ಚಲು ಹಾಗೂ 15 ಲಕ್ಷ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳುವ ಮೂಲಕ ಜವಳಿ ಮೇಲಿನ ಪ್ರಸ್ತಾವಿತ ಜಿ.ಎಸ್.ಟಿ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು.

ಜಿಎಸ್‌ಟಿ ಕೌನ್ಸಿಲ್ ಸಭೆಗೂ ಮುನ್ನ ಹಲವು ರಾಜ್ಯಗಳು ಜನವರಿ 1 ರಿಂದ ಜವಳಿ ಉತ್ಪನ್ನಗಳ ಮೇಲಿನ ಹೆಚ್ಚಿನ ತೆರಿಗೆ ದರ ಹೆಚ್ಚಳವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದವು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ  ಗುಜರಾತ್, ಪಶ್ಚಿಮ ಬಂಗಾಳ, ದಿಲ್ಲಿ, ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯಗಳು ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಜನವರಿ 1, 2022ರಿಂದ  ಪ್ರಸ್ತುತ ಶೇಕಡಾ 5 ರಿಂದ ಶೇಕಡಾ 12 ಕ್ಕೆ ಹೆಚ್ಚಿಸುವ ಪರವಾಗಿಲ್ಲ ಎಂದು ಹೇಳಿದ್ದವು.

ಜಿಎಸ್ ಟಿ ಕೌನ್ಸಿಲ್‌ನ ಶಿಫಾರಸುಗಳ ಮೇರೆಗೆ ಈ ಮೊದಲು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ), ಗಾರ್ಮೆಂಟ್ಸ್, ಜವಳಿ ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್ ಟಿ ದರವನ್ನು ಜನವರಿ 1, 2022 ರಿಂದ ಜಾರಿಗೆ ಬರುವಂತೆ ಶೇಕಡಾ 5 ರಿಂದ 12 ಕ್ಕೆ ಏರಿಸಲಾಗುವುದು ಎಂದು ಘೋಷಿಸಿತ್ತು. 

Leave a Reply

Your email address will not be published. Required fields are marked *

error: Content is protected !!