ಲಾಕ್ ಡೌನ್ ವಿಸ್ತರಣೆಯಿಲ್ಲ: ನೈಟ್ ಕರ್ಫ್ಯೂ ಮುಂದುವರಿಕೆ, ಇಂದು ಮಾರ್ಗಸೂಚಿ ಬಿಡುಗಡೆ: ಸುಧಾಕರ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ವಿಸ್ತರಿಸದಿರಲು ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ರಾಜ್ಯಾದ್ಯಂತ ನೈಟ್‌ ಕರ್ಫ್ಯೂ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣದ ಉಸ್ತುವಾರಿ ಸಚಿವರೊಂದಿಗೆ ಸಿಎಂ ಅವರು ಸೋಮವಾರ ಮ್ಯಾರಾಥಾನ್ ಸಭೆ ನಡೆಸಿದರು. ಪ್ರತಿ ವಲಯದ ಪರಿಸ್ಥಿತಿ,ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳ ನಿರ್ವಹಣೆಗೆ ಖುದ್ದಾಗಿ ಮುತುವರ್ಜಿ ವಹಿಸಲಾಗಿದೆ ಎಂದು ಸಚಿವರುಗಳೂ ಮಾಹಿತಿ ನೀಡಿದರು. ಆಗ ಲಾಕ್‌ಡೌನ್‌ ವಿಸ್ತರಣೆ ಮಾಡದಿರುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಲಾಕ್‌ಡೌನ್‌ ವಿಸ್ತರಣೆ ಆಗುವುದಿಲ್ಲವೆಂದು ಸಭೆ ಬಳಿಕ ಮಾತನಾಡಿದ ಸಚಿವರಾದ ವಿ.ಸೋಮಣ್ಣ ಹಾಗೂ ಡಾ.ಕೆ.ಸುಧಾಕರ್‌ ಖಚಿತ ಪಡಿಸಿದರು. ಲಾಕ್‌ಡೌನ್‌ ವಿಸ್ತರಣೆ ಆಗುವುದಿಲ್ಲವೆಂಬ ಕಾರಣಕ್ಕೆ ಲಕ್ಷ್ಮಣ ರೇಖೆ ದಾಟಲು ಅವಕಾಶ ಇರುವುದಿಲ್ಲ. ನೈಟ್‌ ಕರ್ಫ್ಯೂ, ಇದರ ನಿರ್ಬಂಧಗಳೇನು ಎನ್ನುವ ಬಗೆಗಿನ ಮಾರ್ಗಸೂಚಿ ಮಂಗಳವಾರ ಪ್ರಕಟವಾಗಲಿದೆ ಎಂದು ಡಾ.ಸುಧಾಕರ್‌ ತಿಳಿಸಿದರು.

ಬೆಂಗಳೂರು ನಗರದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವಲಯವಾರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಬುಧವಾರ, ಗುರುವಾರದಂದು ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಕಾವೇರಿಯಲ್ಲಿ ಬೆಂಗಳೂರಿನ ವಲಯವಾರು ಕೋವಿಡ್‌ ಉಸ್ತುವಾರಿ ಸಚಿವರು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯ ಶಿಕ್ಷಣ ಸಚಿವ  ಡಾ.ಕೆ.ಸುಧಾಕರ್‌ ಅವರೊಂದಿಗೆ ಸೋಮವಾರ ಸಂಜೆ ಸುದೀರ್ಘ ಸಭೆ ನಡೆಸಿದರು.

ರಾಜಧಾನಿಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದಕ್ಕೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಸೋಂಕಿತರನ್ನು ದಾಖಲಿಸಲು ಬೆಡ್‌ ದೊರಕದಿರುವುದು, ಆಂಬ್ಯುಲೆನ್ಸ್‌ಗಳ ಕೊರತೆ, ಖಾಸಗಿ ಆಸ್ಪತ್ರೆಗಳ ಅಸಹಕಾರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ ಬಗ್ಗೆಯೂ ಪ್ರಸ್ತಾಪವಾಯಿತು. ಈ ನಡುವೆಯೂ ಸಚಿವರ ನೇತೃತ್ವದಲ್ಲಿ ಕೋವಿಡ್‌ ಉಸ್ತುವಾರಿಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಬೇಕು. ಜನರಲ್ಲಿ ವಿಶ್ವಾಸ ತುಂಬುವ ಕೆಲಸವಾಗಬೇಕು.


ಯಾರೂ ಗೊಂದಲದ ಹೇಳಿಕೆ ನೀಡಕೂಡದು. ಕೋವಿಡ್‌ ಜಯಸಿ ಗುಣಮುಖರಾಗಿ ಬಂದವರಿಗೆ ಆಯಾ ವಾರ್ಡ್‌ ಮಟ್ಟದಲ್ಲಿ ಹೆಚ್ಚು ಜನರು ಸೇರದೇ ಅಭಿನಂದಿಸುವ ಕೆಲಸಮಾಡಬೇಕು. ಇದರಿಂದ ಇತರರಲ್ಲಿ ಭರವಸೆ ಮೂಡಿಸಬಹುದು ಎಂದು ಸಿಎಂ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!