ಹೆಚ್ಚಿದ ಕೊರೋನಾ ಸೋಂಕು, ಕೆಎಂಸಿ ಹೊರರೋಗಿ ವಿಭಾಗ ತಾತ್ಕಾಲಿಕ ಸ್ಥಗಿತ
ಮಣಿಪಾಲ ಜುಲೈ 20: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆಡಳಿತ ಮಂಡಳಿಯು ಕೊರೋನಾ ವೈರಸ್ (ಕೋವಿಡ್ 19) ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ಜುಲೈ 21 ರಿಂದ ಜುಲೈ 26 ರವರೆಗೆ ಎಲ್ಲಾ ಹೊರರೋಗಿ ಸೇವಾ ಸೌಲಭ್ಯಗಳನ್ನು ಸ್ಥಗಿತಗೊಳಿಸಿದೆ.
ಜುಲೈ 27 ರಿಂದ ಹೊರರೋಗಿ ವಿಭಾಗವು ಎಂದಿನಂತೆ ಸೇವೆ ಸಲ್ಲಿಸಲಿದೆ. ಉಡುಪಿ ಜಿಲ್ಲೆಯಲ್ಲಿ ಕೊರೋನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಮತ್ತು ಕಳೆದ ಕೆಲವು ದಿನಗಳಿಂದ ನಮ್ಮ ಅನೇಕ ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆಸ್ಪತ್ರೆಯು ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲಿದೆ ಮತ್ತು 200 ಕೋವಿಡ್ 19 ಹಾಸಿಗೆಯನ್ನು ಸಿದ್ಧಪಡಿಸುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊರರೋಗಿ ವಿಭಾಗವನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ.
ಆದಾಗ್ಯೂ ಆಸ್ಪತ್ರೆಯ ಆಡಳಿತ ಮಂಡಳಿಯು ಜನರಿಗೆ ವೈದ್ಯಕೀಯ ಸಮಾಲೋಚನೆಯನ್ನು ನೀಡುವ ಉದ್ದೇಶದಿಂದ 20ನೇ ಜುಲೈ 2020ರಿಂದ ವೀಡಿಯೊ ಸಮಾಲೋಚನಾ ಸೌಲಭ್ಯವನ್ನು ಆರಂಭಿಸಿದೆ. ಈ ಸೇವೆಯಡಿಯಲ್ಲಿ ಜನರು ತಮ್ಮ ಮನೆಯಲ್ಲಿ ಕುಳಿತು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ದೂರವಾಣಿ ಮೂಲಕ ಅಥವಾ ವೀಡಿಯೋ ಕರೆ ಮೂಲಕ ಸಮಾಲೋಚನೆ ಮತ್ತು ವೈದ್ಯಕೀಯ ಸಲಹೆಯನ್ನು ನೀಡಲಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.00ರಿಂದ ಸಂಜೆ 4.00ರವರೆಗೆ ದೂರವಾಣಿ ಕರೆ ಮಾಡುವುದರ ಮೂಲಕ ಎಲ್ಲಾ ವಿಭಾಗದ ವೈದ್ಯರನ್ನು ವೀಡಿಯೊ ಸಮಾಲೋಚನೆ ಮೂಲಕ ಸಂಪರ್ಕಿಸಬಹುದಾಗಿದೆ. ಸಂಪರ್ಕಿಸಲು 080 47192235ಗೆ ಕರೆ ಮಾಡಬಹುದು. ಆದಾಗ್ಯೂ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ 24X7 ಕಾರ್ಯನಿರ್ವಹಿಸಲಿದೆoದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.