ದೆಹಲಿ: ಜ.1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು ಸರ್ಕಾರ ನಿರ್ಧಾರ
ನವದೆಹಲಿ ಡಿ.17: ದೆಹಲಿಯಲ್ಲಿ ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿಯನ್ನು ರದ್ದು ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ಅದರಂತೆ 2022 ರ ಜ.1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲು ದೆಹಲಿ ಸರ್ಕಾರ ತಯಾರಿ ನಡೆಸಿದೆ. ಆದರೆ ಈ ವಾಹನಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್ಒಸಿ) ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಹಾಗಾಗಿ ಈ ವಾಹನಗಳನ್ನು ಬೇರೆ ಕಡೆಗಳಲ್ಲಿ ನೋಂದಣಿ ಮಾಡಿಕೊಂಡು ಬಳಸಬಹುದಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್.ಜಿ.ಟಿ) ಹೊಡಿಸಿರುವ ನಿರ್ದೇಶನದಲ್ಲಿ ತಿಳಿಸಲಾಗಿದೆ.
ಇನ್ನು ಎನ್ಜಿಟಿ ಪ್ರಕಾರ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳ ನೋಂದಣಿ ಮತ್ತು ಓಡಾಟದ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿದೆ. ಅಲ್ಲದೆ ಜುಲೈ 2016 ರಲ್ಲಿ ಎನ್ಜಿಟಿ ನೀಡಿದ ಆದೇಶದಲ್ಲಿ ತಿಳಿಸಲಾದ 10 ವರ್ಷಗಳಿಗಿಂತ ಹೆಚ್ಚು ಹಳೆಯದಾದ ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸುವ ನಿರ್ದೇಶನವನ್ನು ತಪ್ಪದೆ ಜಾರಿಗೊಳಿಸಬೇಕು ಎಂಬುದನ್ನು ಮತ್ತೊಮ್ಮೆ ತಾಕೀತು ಮಾಡಿದೆ.