| ಹೊಸದಿಲ್ಲಿ ಡಿ.11: ಕೋವಿಡ್ ನಿಂದ ಇಡೀ ಪ್ರಪಂಚ ತತ್ತರಿಸಿ ಹೋಗಿದ್ದು ಗೊತ್ತಿರುವ ವಿಚಾರ. ಆದರೆ ಇದೀಗ ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಕೋವಿಡ್ ನಿಂದ ಅತೀ ಹೆಚ್ಚು ಮರಣ ಪ್ರಮಾಣ ಹೊಂದಿರುವ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಅಧಿಕೃತ ಅಂಕಿಅಂಶ ಗಳ ಪ್ರಕಾರ ಡಿ.10 ರ ವೇಳೆ ಗೆ 4.75 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ವಿಶ್ವದಲ್ಲಿ ಅಮೆರಿಕ (8.2 ಲಕ್ಷ) ಮತ್ತು ಬ್ರೆಜಿಲ್ (6.2ಲಕ್ಷ) ಬಳಿಕ ಗರಿಷ್ಠ ಸಾವು ಕಂಡ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಕಳೆದ 64 ದಿನಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ನಿಧಾನವಾಗಿ ಇಳಿಕೆ ಪ್ರವೃತ್ತಿ ಕಂಡಿದ್ದರೂ, ಹಿಂದೆ ಸಂಭವಿಸಿದ ಲೆಕ್ಕಕ್ಕೆ ಸಿಗದ ಸಾವನ್ನು ಅಧಿಕೃತಗೊಳಿಸಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಳ ಕಂಡಿದೆ. ದೇಶದಲ್ಲಿ ಕೊನೆಯ 25 ಸಾವಿರ ಮಂದಿಯ ಸಾವು 64 ದಿನಗಳಲ್ಲಿ ಸಂಭವಿಸಿದೆ. ಈ ಹಿಂದೆ ಸಂಭವಿಸಿದ್ದ 25 ಸಾವಿರ ಸಾವಿಗಿಂತ ಎರಡು ದಿನ ಕಡಿಮೆ ಅವಧಿಯಲ್ಲಿ ಈ ಬಾರಿ 25 ಸಾವಿರ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.
ಕೊನೆಯ 25ಸಾವಿರ ಸಾವುಗಳ ಪೈಕಿ15923 ಸಾವುಗಳು ಹಿಂದಿನ ದಿನಗಳಲ್ಲಿ ಸಂಭವಿಸಿದ್ದ ಸಾವುಗಳಾಗಿದ್ದು, ಕೋರ್ಟ್‌ಗಳು ಪ್ರಕಟಿಸಿದ ಹೊಸ ಮಾರ್ಗಸೂಚಿಯ ಬಳಿಕ ಲೆಕ್ಕಾಚಾರ ಹಾಕಲಾದ ಹಳೆಯ ಸಾವಿನ ಪ್ರಕರಣಗಳಾಗಿವೆ. ಹಳೆಯ ಸಾವು ಪ್ರಮುಖವಾಗಿ ಕೇರಳದಿಂದ ವರದಿಯಾಗಿವೆ.ಬಿಹಾರ ಕೂಡ ಇತ್ತೀಚೆಗೆ 2200 ಹಳೆಯ ಸಾವುಗಳ ಸಂಖ್ಯೆಯನ್ನು ಪ್ರಕಟಿಸಿತ್ತು. ಸೋಂಕಿತರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಸಾವಿನ ಪ್ರಮಾಣ ಪ್ರಸ್ತುತ ಶೇಕಡ 1.37 ರಷ್ಟಿದೆ. ಇದು ಮೊದಲ ಅಲೆಯಲ್ಲಿ ಇದ್ದ ಸಾವಿನ ದರ (1.41%)ಕ್ಕೆ ಸನಿಹದಲ್ಲಿದೆ. ಈ ಬಾರಿ ಎರಡನೇ ಅಲೆ ಅಬ್ಬರಿಸಿ ಪ್ರಕರಣಗಳ ಸಂಖ್ಯೆ ಹೆಚ್ಚಿದಾಗ ಸಾವಿನದರ ಕಳೆದ ಮೇ ತಿಂಗಳಲ್ಲಿ ಶೇಕಡ 1.1ಕ್ಕೆ ಇಳಿದಿತ್ತು. ಅಮೆರಿಕದಲ್ಲಿ ಸಾವಿನ ದರ ಶೇಕಡ 1.61 ರಷ್ಟಿದ್ದರೆ, ಬ್ರೆಜಿಲ್‌ನಲ್ಲಿ ಈ ಪ್ರಮಾಣ ಶೇಕಡ 2.77 ಆಗಿದೆ. ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಗುವ ಜತೆಗೆ ಹಳೆಯ ಸಾವಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದ್ದರಿಂದ ಸಾವಿನ ದರದಲ್ಲಿ ಕೂಡಾ ಅಲ್ಪ ಏರಿಕೆಯಾಗಿದೆ ಎಂದು ವರದಿಯಾಗಿದೆ. | |