ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿದ ಕೇಂದ್ರ ಸರ್ಕಾರ- ಒಂದು ವರ್ಷದ ನಿರಂತರ ರೈತರ ಹೋರಾಟಕ್ಕೆ ಇಂದು ತೆರೆ ?
ನವದೆಹಲಿ: ಕೇಂದ್ರ ಸರ್ಕಾರಕ್ಕೆ ರೈತರು ನೀಡಿದ್ದ ಡೆಡ್ ಲೈನ್ ಇಂದಿಗೆ ಮುಕ್ತಾಯವಾಗುತ್ತಿದ್ದು, ಕೃಷಿ ಕಾನೂನು ಮತ್ತು ರೈತರ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರೈತರು ನಡೆಸುತ್ತಿದ್ದ ಬೃಹತ್ ಪ್ರತಿಭಟನೆಗೆ ಇಂದು ತೆರೆ ಬೀಳುವ ಸಾಧ್ಯತೆ ಇದೆ.
ಹೌದು… ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ಸೇರಿದಂತೆ ಪ್ರತಿಭಟನಾ ನಿರತ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸರ್ಕಾರವು ಲಿಖಿತ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರೈತರು ಇಂದೇ ತಮ್ಮ ಪ್ರತಿಭಟನೆಗೆ ತೆರೆ ಎಳೆಯುವ ಸಾಧ್ಯತೆ ಇದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ವರದಿಯಲ್ಲಿರುವಂತೆ ರೈತ ಸಂಘಗಳಿಗೆ ಬರೆದ ಪತ್ರದಲ್ಲಿ ಸರ್ಕಾರವು ಎಂಎಸ್‌ಪಿ ಕುರಿತು ಸಮಿತಿಯನ್ನು ರಚಿಸುವುದಾಗಿ ಹೇಳಿದೆ. ಬೆಳೆ ತ್ಯಾಜ್ಯ ಸುಡುವಿಕೆ ಸೇರಿದಂತೆ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಕೈಬಿಡಲಾಗುವುದು ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ರೈತರು ಚರ್ಚೆ ನಡೆಸುತ್ತಿದ್ದಾರೆ. ಅವರು ಈ ಪ್ರಸ್ತಾಪವನ್ನು ಒಪ್ಪಿಕೊಂಡರೆ, ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ದೇಶದಾದ್ಯಂತ (ಮತ್ತು ಪ್ರಪಂಚದಾದ್ಯಂತ) ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.
ಇಂದೇ ನಿರ್ಧಾರ ಸಾಧ್ಯತೆ
ಇನ್ನು ಪ್ರತಿಭಟನಾ ನಿರತ ರೈತರ ಮೂಲಗಳ ಪ್ರಕಾರ ಇಂದು ಮುಷ್ಕರ ನಿರತ ರೈತ ಮುಖಂಡರು ಮಹತ್ವದ ಸಭೆ ಸೇರಲಿದ್ದು, ಇಂದೇ ಪ್ರತಿಭಟನೆ ಅಂತ್ಯಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸರ್ಕಾರ ಭರವಸೆ ನೀಡಿರುವ ಹಿನ್ನಲೆಯಲ್ಲಿ 15 ತಿಂಗಳಿನಿಂದ ಪಟ್ಟುಬಿಡದೆ ನಡೆಯುತ್ತಿರುವ ರೈತರ ಆಂದೋಲನಕ್ಕೆ ಇಂದೇ ತೆರೆ ಬೀಳಲಿದೆ.
ಪೊಲೀಸ್ ಪ್ರಕರಣಗಳನ್ನು ಕೈ ಬಿಡಿ ಕೇಂದ್ರಕ್ಕೆ ರೈತರ ಒತ್ತಾಯ
ಇನ್ನು ರೈತರು ಸರ್ಕಾರದ ಪ್ರಸ್ತಾಪಕ್ಕೆ ಹೆಚ್ಚಾಗಿ ಒಲವು ತೋರುತ್ತಿರುವಾಗ ರೈತರಲ್ಲಿ ಕೆಲವರ ಮೇಲಿನ ಪೊಲೀಸ್ ಪ್ರಕರಣಗಳನ್ನು ಕೈಬಿಡುವ ನಿರ್ಧಾರ ಬೇಡಿಕೆಯನ್ನು ಕೈ ಬಿಡಬೇಕೆಂದು ಸರ್ಕಾರ ಬಯಸಿದೆ. ಇದೇ ವಿಚಾರವಾಗಿ ಎರಡನೇ ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆ ಇದೆ ಹೇಳಲಾಗಿದೆ. ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಫೋನ್ ಕರೆ ಮಾಡಿ ತಮ್ಮೊಂದಿಗೆ ಮಾತನಾಡಿದ್ದಾರೆ ಎಂದು ರೈತ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಇದು ನಡೆದಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಿಂದ ಭಾರತದಾದ್ಯಂತ ರೈತರು ಹೋರಾಟ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳ ಪ್ರತಿಭಟನೆಯ ಹೊರತಾಗಿಯೂ ಮೂರು ಭಾರಿ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಸತ್ ಮೂಲಕ ಮಂಡಿಸಲಾಯಿತು. ಆದರೆ ಈ ಕಾನೂನಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪ್ರಮುಖವಾಗಿ ರೈತ ಸಮುದಾಯ ಈ ಕಾನೂನುಗಳ ವಿರುದ್ಧ ಸಮರವನ್ನೇ ಸಾರಿತ್ತು. ಕೃಷಿ ಕಾನೂನು ವಾಪಸ್ (farm laws repeal) ತೆಗೆದುಕೊಳ್ಳಲು ನಡೆಸಿದ ಹೋರಾಟದಲ್ಲಿ ಭದ್ರತಾ ಪಡೆಗಳೊಂದಿಗೆ ಹಿಂಸಾತ್ಮಕ ಘರ್ಷಣೆಗಳು, ಬಿರುಸಿನ ಚರ್ಚೆಗಳು ಮತ್ತು ಸಂಸತ್ತಿನಲ್ಲಿ ಗದ್ದಲಗಳು ಒಂದೆಡೆಯಾದರೆ ರೈತರ ಆಂದೋಲನದಲ್ಲಿ 700 ರೈತರು ಸಾವಿಗೀಡಾಗಿದ್ದರು. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು “ಕ್ಷಮೆಯಾಚನೆ” ಮಾಡಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಹೇಳಿದರು. ನವೆಂಬರ್ 29 ರಂದು ಸಂಸತ್ನಲ್ಲಿ ಕೃಷಿ ಕಾನೂನು ರದ್ದತಿ ಮಸೂದೆಯನ್ನು ಅಂಗೀಕರಿಸಲಾಯಿತು.