| ಅಥೆನ್ಸ್ ಡಿ.6: ಗ್ರೀಸ್ ಗೆ ಬಂದಿದ್ದ ಪೋಪ್ ಫ್ರಾನ್ಸಿಸ್ ಗೆ ಹಿರಿಯ ಗ್ರೀಕ್ ಸಾಂಪ್ರದಾಯಿಕ ಕೈಸ್ತ ಧರ್ಮಗುರು ಒಬ್ಬರು ಘೆರಾವೊ ಹಾಕಿದ್ದಾಗಿ ಸುದ್ದಿಯೊಂದು ವರದಿಯಾಗಿದೆ.
ಸಾಂಪ್ರದಾಯಿಕ ಚರ್ಚ್ ನ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಪೋಪ್ ಫ್ರಾನ್ಸಿಸ್ ಅವರು ಗ್ರೀಸ್ ಗೆ ಆಗಮಿಸಿದ್ದರು. ಗ್ರೀಕ್ ರಾಜಧಾನಿ ಅಥೆನ್ಸ್ ನಲ್ಲಿರುವ ಆರ್ಚ್ ಬಿಷಪ್ ಲೆರೊನಿಮೋಸ್ ಅವರ ನಿವಾಸಕ್ಕೆ ಪೋಪ್ ಆಗಮಿಸಿದಾಗ ಮನೆಯ ಹೊರಭಾಗದಲ್ಲಿ ನಿಂತಿದ್ದ ಧರ್ಮಗುರು ‘ಪೋಪ್, ನೀವೊಬ್ಬ ಧರ್ಮ ವಿರೋಧಿ ಎಂದು ಮೂರು ಬಾರಿ ಘೋಷಣೆ ಕೂಗಿದರು. ಆತನನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿದ್ದಾಗ, ಆ ಬಗ್ಗೆ ಗಮನವನ್ನೇ ನೀಡದೆ ಪೋಪ್ ಫ್ರಾನ್ಸಿಸ್ ಮನೆಯೊಳಗೆ ತೆರಳಿದರು ಎಂದು ವರದಿಯಾಗಿದೆ.
20 ವರ್ಷದ ಹಿಂದೆ ಪೋಪ್ 2ನೇ ಜಾನ್‌ಪಾಲ್ ಗ್ರೀಸ್‌ಗೆ ಭೇಟಿ ನೀಡಿದ ಬಳಿಕ ಫ್ರಾನ್ಸಿಸ್ ಭೇಟಿ ನೀಡಿದ್ದಾರೆ. ಈ ವೇಳೆ ಲೆರೋನಿಸ್ ಅವರು ಪೋಪ್ ಫ್ರಾನ್ಸಿಸ್ ರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಆರ್ಚ್‌ಬಿಷಪ್ ಜತೆಗಿನ ಸಭೆಯಲ್ಲಿ, ಶತಮಾನಗಳಿಂದಲೂ ಮುಂದುವರಿದಿರುವ ಪರಸ್ಪರ ಅಪನಂಬಿಕೆ ಮತ್ತು ಪೈಪೋಟಿಯ ಭಾವನೆಯನ್ನು ಮೀರಿ ನಿಲ್ಲುವ ವಾಗ್ದಾನವನ್ನು ಉಭಯ ಮುಖಂಡರೂ ಮತ್ತೆ ಸ್ಮರಿಸಿಕೊಂಡರು. ಈ ವೇಳೆ ಲೆರೋನಿಸ್ ಅವರು, ವಲಸಿಗರ ಬಿಕ್ಕಟ್ಟು, ಹವಾಮಾನ ಬದಲಾವಣೆಯಂತಹ ಜಾಗತಿಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಪೋಪ್ ಅವರ ಆಶಯವನ್ನು ತಾನು ಬೆಂಬಲಿಸುವುದಾಗಿ ಹೇಳಿದರು.
ಇನ್ನು ಅಧಿಕಾರ ದಾಹ ಹಾಗೂ ಅನುಕೂಲ ಪಡೆಯುವ ಉದ್ದೇಶದಿಂದ ಕ್ಯಾಥಲಿಕ್ ಕೈಸ್ತರು ನಡೆಸಿದ್ದ ಕೃತ್ಯದ ಬಗ್ಗೆ ನಾಚಿಗೆಪಡುವಂತಾಗಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಈ ಮೂಲಕ ಸಾಂಪ್ರದಾಯಿಕ ಕ್ರೈಸ್ತರ ವಿರುದ್ಧ ಕ್ಯಾಥಲಿಕ್ ಕೈಸ್ತರು, ಶತಮಾನಗಳಿಗೂ ಹಿಂದೆ ಉದ್ದೇಶಪೂರ್ವಕವಾಗಿ ಅಥವಾ ಅಚಾನಕ್ ಆಗಿ ನಡೆಸಿರಬಹುದಾದ ಪಾಪ ಕೃತ್ಯಗಳಿಗೆ ಕ್ಷಮೆ ಯಾಚಿಸಲು ಈ ಸಂದರ್ಭವನ್ನು ಬಳಸಿಕೊಂಡರು. ಇದಕ್ಕೂ ಮುನ್ನ ಪೋಪ್ ಸಿಪ್ರಸ್ ದ್ವೀಪರಾಷ್ಟ್ರಕ್ಕೆ ಭೇಟಿ ನೀಡಿದಾಗಲೂ ಅವರ ವಿರುದ್ಧ ಸಾಂಪ್ರದಾಯಿಕ ಕ್ರೈಸ್ತರು ಪ್ರತಿಭಟನೆ ನಡೆಸಿದ್ದರು. ಪೋಪ್ ಅವರ ಪ್ರಾಮುಖ್ಯತೆ ಸೇರಿದಂತೆ ಹಲವು ವಿಷಯಗಳಲ್ಲಿ ಕ್ಯಾಥಲಿಕ್ ಕೈಸ್ತರು ಹಾಗೂ ಸಾಂಪ್ರದಾಯಿಕ ಕ್ರೈಸ್ತರ ಮಧ್ಯೆ ಭಿನ್ನಾಭಿಪ್ರಾಯವಿದೆ. | |