ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಿ: ಮಹಿಳಾ ಕಾಂಗ್ರೆಸ್

ಉಡುಪಿ (ಉಡುಪಿ ಟೈಮ್ಸ್ ವರದಿ): ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಕೋರೊನ ವಾರಿಯರ್ಸ್ ಆಗಿ ದುಡಿದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ರೂ.12,000/- ಗೌರವ ಧನ ನಿಗದಿ ಹಾಗೂ ಅವರ ಆರೋಗ್ಯ ದೃಷ್ಟಿಯಿಂದ ಸುರಕ್ಷ ಉಪಕರಣಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧಿಕಾರಿಯ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.


ಕರ್ನಾಟಕ ರಾಜ್ಯದಲ್ಲಿ ಸುಮಾರು 42,000 ಆಶಾ ಕಾರ್ಯಕರ್ತೆಯರು ಕಳೆದ ನಾಲ್ಕು ತಿಂಗಳುಗಳಿಂದ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮ ಮಟ್ಟದಲ್ಲಿ ಜನರೊಂದಿಗೆ ಅತೀ ಹತ್ತಿರದ ಸಂಬಂಧವಿರುವ ಅವರು ಪ್ರತಿದಿನ ನಿರಂತರವಾಗಿ ದುಡಿಯುತ್ತಿದ್ದಾರೆ.

ಪ್ರತ್ಯೇಕವಾಗಿ ನಿರ್ಬಂಧಿತ ವಲಯ (ಕಂಟೇನ್ಮೆಂಟ್ ಝೋನ್)ಗಳಲ್ಲಿ ಕೂಡ ಹೋಗಿ, ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಇಲಾಖೆಗೆ ನೀಡುವುದನ್ನು ತುಂಬಾ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. 


ಎಲ್ಲಾ ಜನರು ಮನೆಯೊಳಗೆ ಕೂತ ಸಂದರ್ಭದಲ್ಲಿಯೂ ಈ ನಮ್ಮ ವಾರಿಯರ್ಸ್ ಮನೆ ಮನೆಗೆ ಭೇಟಿ ನೀಡುತ್ತಿದ್ದರು. ಮಾತ್ರವಲ್ಲ ಆನೇಕ ಕಡೆಗಳಲ್ಲಿ ಜನರಿಂದ ನಿಂದನೆಗೆ ಮತ್ತು ಹಲ್ಲೆಗೆ ಒಳಗಾಗುತ್ತಿದ್ದಾರೆ. ಅವರಿಗೆ ಸದ್ಯ ನೀಡುತ್ತಿರುವ ರೂ.4,000/- ಮಾಸಿಕ ಗೌರವಧನ ನಿಜವಾಗಿಯೂ ಅವರು ಮಾಡುತ್ತಿರುವ ಕೆಲಸಕ್ಕೆ ಅತೀ ಕಡಿಮೆ ಎಂದರೆ ತಪ್ಪಾಗಲಾರದು ಎಂದು ಜಿಲ್ಲಾಧಿಕಾರಿ ಅವರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.


ಇತ್ತೀಚೆಗೆ ಆಶಾ ಕಾರ್ಯಕರ್ತೆಯರು ಸರಕಾರದ ಮೇಲೆ ಒತ್ತಡ ಹೇರಲು ಬೆಂಬಲ ಕೋರಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಅವರ ಹೋರಾಟಕ್ಕೆ ಡಿಕೆಶಿ ಬೆಂಬಲ ಸೂಚಿಸಿದ್ದಾರೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಆಶಾ ಕಾರ್ಯಕರ್ತೆಯರ ಪರವಾಗಿ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಈ ಕೋರೊನ ಯುದ್ಧದ ಸಂದರ್ಭದಲ್ಲಿ ಕೂಡ ಅವರಿಗೆ ಸರ್ಕಾರದಿಂದ ಯಾವುದೇ ಸುರಕ್ಷಾ ಉಪಕರಣಗಳನ್ನು ನೀಡಿಲ್ಲ.


ಆದುದರಿಂದ ಜನರ ಜೊತೆ ಅತಿ ಹತ್ತಿರದ ಕೊಂಡಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ಅವರ ಬೇಡಿಕೆಯಂತೆ ಮಾಸಿಕ ರೂ. 12,000/- ಗೌರವ ಧನವನ್ನು ನಿಗದಿ ಮಾಡಬೇಕು ಹಾಗೂ ಅವರಿಗೆ ಎಲ್ಲಾ ಸುರಕ್ಷಾ ಉಪಕರಣಗಳನ್ನು ನಿರಂತರವಾಗಿ ಪೂರೈಸುತ್ತಿರಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಡುಪಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.


ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ತಾಲ್ಲೂಕು ಪಂಚಾಯತಿ ಸದಸ್ಯೆ ಡಾ. ಸುನೀತಾ ಶೆಟ್ಟಿ, ಪ್ರಮುಖರಾದ ಜ್ಯೋತಿ ಹೆಬ್ಬಾರ್, ರೋಶನಿ ಒಲಿವರ್, ಗೋಪಿ ಕೆ ನಾಯ್ಕ್, ಚಂದ್ರಿಕಾ ಶೆಟ್ಟಿ, ಫೌಜಿಯಾ ಸಾಧಿಕ್, ಜ್ಯೋತಿ ಬರೆಟ್ಟೊ, ರೋಜಲಿನ್ ಕ್ರಾಸ್ತಾ, ಶಾಂತಿ ಪಿರೇರಾ, ಮರೀನಾ, ಐರಿನ್ ಡಿಸೋಜಾ, ಪ್ರಮೀಳಾ ಜತ್ತನ್ನ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!