ಓಮಿಕ್ರಾನ್ ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ- ವಿಶ್ವ ಆರೋಗ್ಯ ಸಂಸ್ಥೆ
ಜಿನಿವಾ: ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವೇ ಅಥವಾ ಡೆಲ್ಟಾ ಸೇರಿದಂತೆ ಬೇರೆ ರೂಪಾಂತರ ಮಾದರಿಗಳಿಗೆ ಹೋಲಿಸಿದರೆ ರೋಗದ ತೀವ್ರತೆ ಹೆಚ್ಚಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಬೇರೆ ರೂಪಾಂತರ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ರೋಗಲಕ್ಷಣಗಳು ಭಿನ್ನ ಎಂಬ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ ಎಂದು ಡಬ್ಲ್ಯುಎಚ್‌ಒ ಹೇಳಿದೆ. ವಿಶ್ವವಿದ್ಯಾಲಯಗಳ ಪ್ರಾಥಮಿಕ ಅಧ್ಯಯನಗಳಲ್ಲಿ ಸೋಂಕಿಗೆ ಒಳಗಾದ ಯುವಕರಲ್ಲಿ ರೋಗ ಲಕ್ಷಣ ಸಾಧಾರಣವಾಗಿರುತ್ತದೆ. ಓಮಿಕ್ರಾನ್ ಗಂಭೀರತೆ ಬಗ್ಗೆ ತಿಳಿಯಲು ಹಲವು ವಾರಗಳು ಬೇಕಾಗುತ್ತದೆ ಎಂದು ಅದು ಹೇಳಿದೆ.
‘ಕಳವಳಕಾರಿ ಕೊರೊನಾ ರೂಪಾಂತರ’ಎಂದು ಹೆಸರಿಸಲಾಗಿರುವ B.1.1.529(ಓಮಿಕ್ರಾನ್) ತಳಿಯ ಬಗ್ಗೆ ಮತ್ತಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ದಕ್ಷಿಣ ಆಫ್ರಿಕಾ ಮತ್ತು ವಿಶ್ವದ ಹಲವು ದೇಶಗಳಲ್ಲಿ ವಿಭಿನ್ನ ದೃಷ್ಟಿಕೋನಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಸಂಶೋಧನೆಗಳಿಂದ ಹೊರಬರುವ ಫಲಿತಾಂಶಗಳನ್ನು ಕಾಲ ಕಾಲಕ್ಕೆ ಹಂಚಿಕೊಳ್ಳುತ್ತಿರುತ್ತೇವೆ. ಆದರೆ, ಡೆಲ್ಟಾ ಸೇರಿದಂತೆ ಇತರೆ ಕೊರೊನಾ ರೂಪಾಂತರ ತಳಿಗಳಿಗೆ ಹೋಲಿಸಿದರೆ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅದು ತಿಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಹಲವರಿಗೆ ಕೋವಿಡ್ ಪಾಸಿಟಿವ್ ಆಗುತ್ತಿದೆ. ಇದು ಓಮಿಕ್ರಾನ್‌ನಿಂದಲೇ ಆಗಿದೆಯೇ ಎಂಬುದನ್ನು ಪತ್ತೆಹಚ್ಚುವಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ನಿರತರಾಗಿದ್ದಾರೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಹೊಸ ರೂಪಾಂತರ ತಳಿಯ ರೋಗದ ಗಂಭೀರತೆ ಬಗ್ಗೆ ಪ್ರತಿಕ್ರಿಯಿಸಿರುವ ಡಬ್ಲ್ಯುಎಚ್‌ಒ, ‘ಬೇರೆ ರೂಪಾಂತರಗಳಿಗೆ ಹೋಲಿಸಿದರೆ ಓಮಿಕ್ರಾನ್ ಸೋಂಕಿತರಲ್ಲಿ ರೋಗದ ಗಂಭೀರತೆ ಹೆಚ್ಚಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ’ ಎಂದು ಅದು ಹೇಳಿದೆ.
ದಕ್ಷಿಣ ಆಫ್ರಿಕಾದ ಪ್ರಾಥಮಿಕ ವರದಿಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ‘ಅಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿರಬಹುದು’ ಎಂದು ಅದು ಹೇಳಿದೆ. ಡೆಲ್ಟಾ ಸೇರಿದಂತೆ ಎಲ್ಲ ರೂಪಾಂತರ ತಳಿಗಳಿಂದ ವಿಶ್ವದಲ್ಲಿ ದೈಹಿಕವಾಗಿ ದುರ್ಬಲರಾಗಿರುವ ಜನರಲ್ಲಿ ರೋಗದ ತೀವ್ರತೆ ಹೆಚ್ಚಳ ಮತ್ತು ಸಾವು ಸಂಭವಿಸಿವೆ. ಹಾಗಾಗಿ, ರೋಗ ಹರಡದಂತೆ ತಡೆಯುವುದೊಂದೇ ಸೂಕ್ತ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಎಲ್ಲರಿಗೂ ಲಸಿಕೆ ವಿತರಣೆಗೆ ನಾವು ಹೆಚ್ಚು ಸಮಯ ತೆಗೆದುಕೊಂಡಷ್ಟು ದಿನ ವೈರಸ್ ಹರಡುವಿಕೆ, ರೂಪಾಂತರ ಮತ್ತು ಮತ್ತಷ್ಟು ಅಪಾಯಕಾರಿಯಾಗುತ್ತದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಅಡಾನೊಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಹಾಗಾಗಿ, ವಿಶ್ವದಾದ್ಯಂತ ಕೊರೊನಾದಿಂದ ಹೆಚ್ಚು ತೊಂದರೆಗೀಡಾಗುವ ಸಮುದಾಯಗಳಾದ ಹಿರಿಯರು, ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆದಷ್ಟು ಬೇಗ ಸಂಪೂರ್ಣ ಲಸಿಕೆ ಮತ್ತು ಬೇಗ ಚಿಕಿತ್ಸೆ ಒದಗಿಸುವತ್ತ ಹೆಜ್ಜೆ ಇಡಬೇಕು ಎಂದು ಅವರು ಹೇಳಿದ್ದಾರೆ.