ಶೇ.15 ರಷ್ಟು ಪ್ರಯಾಣ ದರ ಹೆಚ್ಚಿಸಿ ಖಾಸಗಿ ಬಸ್ ಸಂಚಾರ
ರಾಯಚೂರು: ಇನ್ನೆರಡು ದಿನಗಳಲ್ಲಿ ಖಾಸಗಿ ವಾಹನಗಳ ಸಂಚಾರ ಆರಂಭವಾಗಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ರಾಯಚೂರಿನಲ್ಲಿ ಕೋವಿಡ್ 19 ಕುರಿತ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು ಖಾಸಗಿ ಬಸ್ ಓಡಾಟ ಕಡಿಮೆಯಿರುವುದರಿಂದ ರಸ್ತೆ ಸಾರಿಗೆ ಸಂಸ್ಥೆಗೂ ಹಾನಿಯಾಗುತ್ತಿದೆ. ರಾಜ್ಯ ಸರ್ಕಾರ ಸೇವಾ ಭಾವನೆಯಿಂದ ಬಸ್ ಓಡಿಸುತ್ತಿದೆ ಎಂದರು.
ಖಾಸಗಿಯವರು ಶೇ.15 ರಷ್ಟು ಹೆಚ್ಚು ಪ್ರಯಾಣ ದರ ಮಾಡಿ ಬಸ್ ಓಡಿಸಲು ಪರವಾನಿಗೆ ನೀಡಲಾಗಿದೆ. ಶೇ.50 ರಷ್ಟು ಹೆಚ್ಚು ಮಾಡಲು ಕೇಳಿಕೊಂಡಿದ್ದರು. ಆದರೆ ಶೇ.15 ಕ್ಕೆ ಮಾತ್ರ ಅವಕಾಶ ನೀಡಿದ್ದೇವೆ. ಖಾಸಗಿಯವರ ಟ್ಯಾಕ್ಸ್ ಮನ್ನಾ ಮಾಡಲಾಗಿದೆ. ಖಾಸಗಿ ವಾಹನಗಳಲ್ಲಿ ಓಡಾಡುವ ಪ್ರಯಾಣಿಕರ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ. ಸರ್ಕಾರಿ ಸಾರಿಗೆ ಬಸ್ ಗಳಿಗೆ ಅನ್ವಯವಾಗಿರುವ ಎಲ್ಲಾ ನಿಯಮಗಳನ್ನ ಅವರು ಪಾಲಿಸಬೇಕು ಅಂತ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಮಹಾರಾಷ್ಟ್ರ ಮತ್ತು ಗುಜರಾತ್ ನಿಂದ ನಮಗೆ ಸಮಸ್ಯೆಯಾಗುತ್ತಿದೆ. ಮಹಾರಾಷ್ಟ್ರದಲ್ಲೂ ಮೂರು ಜಿಲ್ಲೆಯಲ್ಲಿ ಕೊರೊನಾ ಇಲ್ಲಾ ಹಾಗಾಗಿ ಭಯಬೇಡ. ಅಲ್ಲಿನ ಸೋಂಕಿತ ಜಿಲ್ಲೆಗಳಿಗೆ ಧಾರಾವಾಡ, ಬೆಳಗಾಂ, ವಿಜಯಪುರದಿಂದ ಹೆಚ್ಚು ಜನ ಹೋಗಿದ್ದಾರೆ. 16 ರಿಂದ 18 ಸಾವಿರ ಜನರನ್ನ ರಾಜ್ಯಕ್ಕೆ ಕರೆತಂದಿದ್ದೇವೆ. ಗುಜರಾತ್, ಮಹಾರಾಷ್ಟ್ರದ ಕೆಲವು ಪಟ್ಟಣಗಳಲ್ಲಿ ಕೊರೊನಾ ಹೆಚ್ಚು ಇದೆ. ಅಲ್ಲಿಂದ ಬಂದ ನಮ್ಮ ಜನರಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದರು.
ರಾಜ್ಯಸರ್ಕಾರ ಎಲ್ಲರಿಗೂ ಸಾರಿಗೆ ಸೌಲಭ್ಯ ಕೊಡಲು ತೀರ್ಮಾನಿಸಿದೆ. ನಮ್ಮ ರಾಜ್ಯದವರನ್ನ ಹೊರಗಡೆಯಿಂದ ಕರೆತರುತ್ತಿದ್ದೇವೆ. ಇಲ್ಲಿದ್ದವರನ್ನ ಕಳುಹಿಸುತ್ತಿದ್ದೇವೆ. ಪ್ರವಾಸಿ ಕಾರ್ಮಿಕರಿಂದ ರಾಯಚೂರಿಗೆ ಸಮಸ್ಯೆ ಬಂದಿದೆ. ಇನ್ನೂ ಎಷ್ಟು ದಿನ ಕೊರೊನಾ ಮುಂದೆ ಹೋಗುತ್ತದೆ ಅನ್ನೋ ಅಂದಾಜಿಲ್ಲ. ಈಗಲೇ 10 ದಿನದಲ್ಲಿ ಮುಗಿಯುತ್ತೇ ಅನ್ನೋ ಭ್ರಮೆ ಬೇಡ. ಸಾಮಾಜಿಕ ಅಂತರವನ್ನ ಸಾರ್ವಜನಿಕರು ಕಾಪಾಡಬೇಕು. ಬೈಕ್ ನಲ್ಲಿ ಒಬ್ಬರೇ ಹೋಗುವಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಅಂತ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.