ತನ್ನೂರಿನ ಜನರ ಹೃದಯದಲ್ಲಿ ಶಾಶ್ವತ ‘ಕ್ವಾರಂಟೈನ್’ ಆದ ವಿಜಯ್ ಧೀರಜ್..!
ಶಿರ್ವ:(ಉಡುಪಿ ಟೈಮ್ಸ್ ವರದಿ) ಈ ಮೇಲಿನ ಶೀರ್ಷಿಕೆ ನೋಡಿ ಹಲವಾರು ಮಂದಿಗೆ ಟೆನ್ಷನ್ ಆಗಿರಬಹುದು. ಅದು ಇಂತಹ ಸಮಯದಲ್ಲಿ ಕ್ವಾರಂಟೈನ್ ಎಂದ ಕೂಡಲೇ ಕೊರೋನದ ಹೆದರಿಕೆ ಆರಂಭವಾಗುತ್ತದೆ. ಹಾಗಾದರೆ ಇದೇನಪ್ಪಾ ತನ್ನೂರಿನ ಜನರ ಹೃದಯದಲ್ಲಿ ಶಾಶ್ವತ ‘ಕ್ವಾರಂಟೈನ್’ ಆದ ವಿಜಯ್ ಧೀರಜ್ ಕಥೆ?
ಹಾಗಾದರೆ ಮುಂದಕ್ಕೆ ಓದಿ..
ಕಳೆದ ಮಳೆಗಾಲದ ಸಮಯದಲ್ಲಿ ಶಿರ್ವ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಬಂಟಕಲ್ಲಿನ ಹೇರೂರಿಗೆ ಕರೆತಂದು ತನ್ನ ಹಿರಿಯರ ಕೃಷಿ ಭೂಮಿಯಲ್ಲಿ ಬೇಸಾಯದ ಮಾಹಿತಿ ಮತ್ತು ಕಾರ್ಯಾಗಾರವನ್ನು ಕಲ್ಪಿಸಿಕೊಟ್ಟು, ಪ್ರಸ್ತುತ ಕಾಲದ ಯುವಕರಿಗೆ ಪ್ರೇರಣೆ ಮತ್ತು ಆದರ್ಶವಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಮಜೂರು ಗ್ರಾಮದ ಬಂಟಕಲ್ಲು ಹೇರೂರು ಪರಿಸರದ ಯುವಕನ ನೈಜ ಕಥೆಯಿದು.
ಬಂಟಕಲ್ಲು ಪರಿಸರದ ಹೇರೂರಿನಲ್ಲಿ ತನ್ನ ಹಿರಿಯರ ಸಮ್ಮುಖದಲ್ಲಿ ಬೆಳೆದ ವಿಜಯ್ ಧೀರಜ್ ಉನ್ನತ ಶಿಕ್ಷಣ ಪಡೆದುಕೊಂಡು ದುಬೈಗೆ ಹಾರಿದ. ತನ್ನ ತಂದೆ ತಾಯಿ ಹಿರಿಯರ ಬೆಳೆಸಿದ ಕೃಷಿ ಭೂಮಿಯತ್ತ ಆಕರ್ಷಣೆ ಇದ್ದದ್ದಾದರೂ, ಅವಕಾಶ ಸಿಕ್ಕಿದ ಕೂಡಲೇ ದುಬೈಗೆ ಪಯಣ ಬೆಳೆಸಿ ಉತ್ತಮ ಉದ್ಯೋಗದಲ್ಲಿದ್ದ ವಿಜಯ್ ಧೀರಜ್, ಸಮಯಕ್ಕೆ ಸರಿಯಾಗಿ ದಂಪತಿ ಜೀವನವನ್ನು ಸ್ವೀಕರಿಸಿದ್ದ. ದಾಂಪತ್ಯ ಜೀವನದಲ್ಲಿ ದೇವರು ಎರಡು ಮಕ್ಕಳನ್ನು ಕೂಡ ಇವರಿಗೆ ಕರುಣಿಸಿದ್ದರು. ಪತ್ನಿ ರಿಚಿ ಡಿಸೋಜಾ ದೆಹಲಿ ಯವರಾದರೂ, ಕೃಷಿ ಮೇಲೆ ವಿಶೇಷ ಆಕರ್ಷಣೆ. ಒಂದೂವರೆ ವರ್ಷದ ಹಿಂದೆಯಷ್ಟೇ ದುಬೈ ಉದ್ಯೋಗಕ್ಕೆ ರಾಜೀನಾಮೆ ನೀಡಿ, ತನ್ನೂರಿನಲ್ಲಿ ಕೃಷಿಯನ್ನು ಬೆಳೆಸುವ ಇರಾದೆಯನ್ನು ಇಟ್ಟುಕೊಂಡು ತನ್ನೂರಿಗೆ ಆಗಮಿಸಿದ ವಿಜಯ್ ದೀರಜ್, ಕಳೆದ ಬೇಸಾಯದ ಸಮಯದಲ್ಲಿ ಕೃಷಿಯನ್ನು ಮಾಡಿದ್ದರು. ಜೊತೆಗೆ ನಗರ ಭಾಗದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳನ್ನು ಕೃಷಿ ಮಾಡುವ ಗದ್ದೆಯಲ್ಲಿ ಬೇಸಾಯದ ಮಾಹಿತಿಯನ್ನು ನೀಡುವುದರ ಜೊತೆಗೆ ಬೇಸಾಯವನ್ನು ಕೂಡ ಮಾಡಿಸಿದ್ದರು. ಜೊತೆಗೆ ಯಾವುದೇ ಸಂದರ್ಭದಲ್ಲೂ ಯಾರಿಗೂ ಸಹಾಯ ಮಾಡಲು ಸಿದ್ಧನಾಗುತ್ತಿದ್ದ ವಿಜಯ್ .
ಇದೀಗ ಕೋರೊನ ಹಾವಳಿಯಿಂದ ವಿಶ್ವವೇ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶವನ್ನು ಲಾಕ್ ಡೌನ್ಗೆ ಒಳಪಡಿಸಿದ್ದರು. ಇದರಿಂದ ದಿನಗೂಲಿ ನೌಕರರು ಮತ್ತು ಬಡ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದವು. ಕೊರೊನ ವಿರುದ್ಧದ ಹೋರಾಟಕ್ಕೆ ಹಲವು ಮಂದಿ ವಿವಿಧ ರೀತಿಯಲ್ಲಿ ಕೈ ಜೋಡಿಸುತಿದ್ದಾರೆ. ಈ ಹೋರಾಟದ ಹಿಂದೆ ನೆರವು ನೀಡುವ ಕೈಗಳು ಯಾವುದೇ ಪ್ರಚಾರಕ್ಕೆ ಹಾತೊರೆಯದೆ ಎಲೆ ಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಹಲವರಲ್ಲಿ ತನ್ನ ಪರಿಸರ ಮತ್ತು ಆಸುಪಾಸಿನಲ್ಲಿ ಸದಾ ಸೇವೆಗೆ ಸಿದ್ಧರಾಗುತ್ತಿದ್ದ ವಿಜಯ್ ದೀರಜ್ ಅವರು ಒಬ್ಬರು. ತಮ್ಮ ಗ್ರಾಮದಲ್ಲಿ ಕೊರೊನ ಸಂಕಷ್ಟಕ್ಕೆ ಈಡಾದ ಕೂಲಿ ಕಾರ್ಮಿಕರ ಮನೆಯಲ್ಲಿ, ದಿನ ಒಂದು ಹೊತ್ತು ಊಟಕ್ಕೆ ಬಳಲುತಿರುವವರಿಗೆ ನೆರವಾಗಿ, ತನ್ನ ಕುಟುಂಬದ ಪರವಾಗಿ ಹಾಗೂ ತಮ್ಮ ದೇಶ ವಿದೇಶದಲ್ಲಿರುವ ಗೆಳೆಯರ ಸಹಕಾರದಿಂದ ಸುಮಾರು 260 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನ ನಿತ್ಯದ ಅಕ್ಕಿ ತರಕಾರಿ ಹಸಿ ವಸ್ತುಗಳು 2-3 ವಾರಕ್ಕೆ ಬೇಕಾಗುವಷ್ಟು ಹಂಚಿ ಊರಿನ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದರ ಒಟ್ಟು ಖರ್ಚು ಸುಮಾರು 2 ಲಕ್ಷ ರೂಪಾಯಿ. ಸಂಕಷ್ಟದಲ್ಲಿರುವವರ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ವಿಜಯ್ ಧೀರಜ್ ಅವರು ತಮ್ಮ ಊರಿನ ಗೆಳೆಯರ ಸಹಕಾರದಿಂದ ಯಾವುದೇ ಜಾತಿ ಬೇಧವಿಲ್ಲದೆ, ಬಡವರು ಶ್ರೀಮಂತ ಲೆಕ್ಕಿಸದೆ ತಮ್ಮ ಗ್ರಾಮ ಹಾಗೂ ನೆರೆಕರೆಯ ಗ್ರಾಮದವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ, ಜನರ ಪರಿಸ್ಥಿತಿಯನ್ನು ಅರ್ಥ ಮಾಡಿ, ನಂತರವೇ ಅವರು ಆಹಾರ ಪದಾರ್ಥಗಳನ್ನು ಹಂಚುತ್ತಿದ್ದಾರೆ. ಇದರಿಂದ ತಾವು ನೀಡಿದ ಆಹಾರ ಪದಾರ್ಥಗಳು ಅಗತ್ಯ ವಿರುವ ಕುಟುಂಬಕ್ಕೆ ತಲುಪುತ್ತಿದೆ ಎಂಬ ಸಂತೃಪ್ತಿ ವಿಜಯ್ರದ್ದು.
ಕಳೆದ ವಾರ ಗ್ರಾಮದ ಆಶಾ ಕಾರ್ಯಕರ್ತೆ, ಬೀಟ್ ಪೊಲೀಸ್ ಮತ್ತು ನರ್ಸ್ಗಳನ್ನು ಸನ್ಮಾನಿಸಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದರು. ಯಾವುದೇ ಸನ್ನಿವೇಶದಲ್ಲೂ ತನ್ನ ಪರಿಸರ ಅಥವಾ ಆಸುಪಾಸಿನವರಿಗೆ ಬೇರೆ ಊರಿಗೆ ಪ್ರಯಾಣಿಸಬೇಕಾದರೆ, ಸ್ವತಃ ವಿಜಯ್ ಧೀರಜ್ ತನ್ನದೇ ವಾಹನದಲ್ಲಿ ಸ್ವತಃ ಚಾಲನೆ ಮಾಡಿ ಸುರಕ್ಷಿತವಾಗಿ ತಲುಪುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ ತನ್ನ ಪರಿಸರದವರಿಗೆ ಹಲವಾರು ಮಾಸ್ಕ್ಗಳನ್ನು ವಿತರಿಸಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಜೊತೆಗೆ ರೋಗಿಗಳಿಗೆ ಔಷಧ ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಮಾಡುತ್ತಿದ್ದಾರೆ. ದೂರದ ದುಬೈಯಲ್ಲಿ ಉತ್ತಮ ಉದ್ಯೋಗವನ್ನು ತ್ಯಾಗ ಮಾಡಿ, ತನ್ನೂರಿನ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ 41 ಹರೆಯದ ವಿಜಯ್ ಧೀರಜ್ ಎಲ್ಲಾ ಯುವಕರಿಗೆ ಆದರ್ಶ.