‘ಓಮಿಕ್ರಾನ್’ ವೈರಸ್ ಭೀತಿ- ನ್ಯೂಯಾರ್ಕ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ನ್ಯೂಯಾರ್ಕ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್-19 ರೂಪಾಂತರಿ ‘ಓಮಿಕ್ರಾನ್’ ಭೀತಿಯ ಹಿನ್ನಲೆಯಲ್ಲಿ ಅಮೆರಿಕದ ನ್ಯೂಯಾರ್ಕ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಎಲ್ಲೆಡೆ ಹೆಚ್ಚಾಗುತ್ತಿರುವ ಕೊವಿಡ್ ಪ್ರಕರಣ ಹಾಗೂ ಓಮಿಕ್ರಾನ್ ಹೊಸ ತಳಿಯ ಕೊರೋನಾ ವೈರಸ್ ಕಾರಣ ನ್ಯೂಯಾರ್ಕ್ ಗವರ್ನರ್ ಕಥಿ ಹೊಚೂಲ್ ಅವರು ಶುಕ್ರವಾರ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಮ್ಮ ರಾಜ್ಯದಲ್ಲಿ ಈ ಹೊಸ ರೂಪಾಂತರವು ಇದುವರೆಗೂ ಪತ್ತೆಯಾಗಿಲ್ಲ. ಆದರೆ ಆಸ್ಪತ್ರೆಗಳಲ್ಲಿ ಅನಿವಾರ್ಯವಲ್ಲದ, ತುರ್ತು ಅವಶ್ಯಕತೆ ಇಲ್ಲದ ಕಾರ್ಯವಿಧಾನಗಳನ್ನು ಮಿತಿಗೊಳಿಸಲು ಮತ್ತು ನಿರ್ಣಾಯಕ ಸರಬರಾಜುಗಳನ್ನು ತ್ವರಿತವಾಗಿ ಪಡೆಯಲು ಆರೋಗ್ಯ ಇಲಾಖೆಗೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಆದೇಶವು ಡಿಸೆಂಬರ್ 3ರಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಜನವರಿ 15ರಂದು ಇತ್ತೀಚಿನ ಡೇಟಾವನ್ನು ಆಧರಿಸಿ ಮರು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಹೇಳಿದರು.
ಮುಂಬರುವ ಚಳಿಗಾಲದಲ್ಲಿ ಕೊರೋನಾ ಹೆಚ್ಚಳವಾಗುವ ಸಾಧ್ಯತೆಯ ಲಕ್ಷಣಗಳನ್ನು ನಾವು ಕಾಣುತ್ತಿದ್ದೇವೆ. ಓಮಿಕ್ರಾನ್ ಹೊಸ ತಳಿ ನಮ್ಮ ರಾಜ್ಯದಲ್ಲಿ ಕಂಡು ಬಂದಿಲ್ಲ. ಆದರೆ ಬರಬಹುದು ಎಂದು ಹೊಚೂಲ್ ಎಚ್ಚರಿಕೆ ನೀಡಿದ್ದಾರೆ.
‘ಏಪ್ರಿಲ್ 2020 ರಿಂದ ರಾಜ್ಯವು ಕಂಡಿರದ ದರದಲ್ಲಿ ನ್ಯೂಯಾರ್ಕ್ ವೈರಸ್ ಈಗ ಪ್ರಸರಣವನ್ನು ಅನುಭವಿಸುತ್ತಿದೆ. ಅದೇ ರೀತಿ, ಹೊಸ ವೈರಸ್ ಆಸ್ಪತ್ರೆಗಳ ದಾಖಲಾತಿಗಳ ದರವು ಕಳೆದ ತಿಂಗಳಿನಿಂದ ದಿನಕ್ಕೆ 300ಕ್ಕೂ ಹೆಚ್ಚು ಹೊಸ ದಾಖಲಾತಿಗಳಿಗೆ ಹೆಚ್ಚುತ್ತಿದೆ. ನಾನು ಈ ಮೂಲಕ ಜನವರಿ 15, 2022 ರವರೆಗೆ ಇಡೀ ನ್ಯೂಯಾರ್ಕ್ ರಾಜ್ಯಕ್ಕೆ ರಾಜ್ಯ ವಿಪತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತೇನೆ. ತುರ್ತು ಪರಿಸ್ಥಿತಿಯು ನ್ಯೂಯಾರ್ಕ್‌ನಲ್ಲಿ ಆಸ್ಪತ್ರೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಯಲು ವ್ಯಾಕ್ಸಿನೇಷನ್ ನೀಡುವಿಕೆಯನ್ನು ಬೆಂಬಲಿಸುತ್ತದೆ ಎಂದು ತಮ್ಮ ಕಾರ್ಯಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಅಮೆರಿಕ, ಬ್ರಿಟನ್, ಕೆನಡಾ ಮತ್ತು ಅನೇಕ ಯುರೋಪಿಯನ್ ರಾಷ್ಟ್ರಗಳಲ್ಲಿ ಓಮಿಕ್ರಾನ್ ಭೀತಿ ಎದುರಿಸುತ್ತಿದ್ದು, ಪರಿಣಾಮ ಸಾಕಷ್ಟು ಪ್ರಯಾಣ ನಿರ್ಬಂಧಗಳನ್ನು ಹೇರಿವೆ. ವಿದೇಶಗಳಿಂದ ಪ್ರಯಾಣಿಸುವ ವಿದೇಶಿ ಪ್ರಜೆಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿವೆ.