ರೈತರ ಮತ್ತೊಂದು ಬೇಡಿಕೆಗೆ ಅಸ್ತು ಎಂದ ಕೇಂದ್ರ ಸರ್ಕಾರ!
ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಸೇರಿದಂತೆ ಹಲವು ಸಂಬಂಧಿತ ವಿಷಯಗಳನ್ನು ಚರ್ಚಿಸಲು ಸರ್ಕಾರ ಘೋಷಿಸಿರುವ ಸಮಿತಿಯಲ್ಲಿ ರೈತ ಸಂಘಗಳ ನಾಯಕರು ಪ್ರತಿನಿಧಿಸಬಹುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶನಿವಾರ ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆ ವಾಪಸ್ಸಾತಿ ಹಾಗೂ ಎಂಎಸ್‌ಪಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ರೈತ ಸಂಘಟನೆಗಳು ಪಟ್ಟುಹಿಡಿದಿವೆ. ಈ ಮಧ್ಯೆ, ರೈತರ ಆಗ್ರಹಕ್ಕೆ ಮಣಿದಿರುವ ಕೇಂದ್ರ ಸರ್ಕಾರ, ಎಂಎಸ್‌ಪಿ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ಕುರಿತು ಮಾತಾನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಸಮಿತಿ ರಚನೆ ಮಾಡುವುದಾಗಿ ಪ್ರಧಾನಿ ಮೋದಿ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ, ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳೂ ಇರುತ್ತಾರೆ ಅಂತಾ ಕೇಂದ್ರ ಸಚಿವರು ತಿಳಿಸಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಕೃಷಿ ಕಾಯ್ದೆಯನ್ನು ಹಿಂಪಡೆಯುವ ಮಸೂದೆಯನ್ನು ಮಂಡಿಸಲಾಗುವುದು ಎಂದಿರುವ ನರೇಂದ್ರ ಸಿಂಗ್ ತೋಮರ್, ರೈತರು ಧರಣಿ ಕೈಬಿಟ್ಟು ತಮ್ಮ ಮನೆಗಳಿಗೆ ಹೋಗಬೇಕು ಎಂದು ಮನವಿ ಮಾಡಿದರು. ಅಂತೆಯೇ, ‘ಪ್ರತಿಭಟನೆಯ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಇದು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ ಮತ್ತು ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ನೀತಿಯಂತೆ ಪರಿಹಾರದ ವಿಷಯವನ್ನೂ ನಿರ್ಧರಿಸುತ್ತವೆ ಎಂದು ಅವರು ಹೇಳಿದರು.
ಕೃಷಿ ತ್ಯಾಜ್ಯ ಸುಡುವುದು ಅಪರಾಧವಲ್ಲ
ಇದೇ ವೇಳೆ , ‘ಕೃಷಿ ತ್ಯಾಜ್ಯ ಸುಡುವುದನ್ನು ಅಪರಾಧವಲ್ಲ ಎಂದು ಪರಿಗಣಿಸಬೇಕು ಎಂಬ ರೈತ ಸಂಘಟನೆಗಳ ಬೇಡಿಕೆಯನ್ನು ಸರ್ಕಾರವು ಒಪ್ಪಿಗೊಂಡಿದೆ. ಮೂರು ಕೃಷಿ ಕಾಯ್ದೆ ರದ್ದತಿ ಮಸೂದೆಯನ್ನು ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನದ ಮೊದಲ ದಿನ ಮಂಡಿಸಲಾಗುತ್ತದೆ ಎಂದು ಮಾಹಿತಿ ನೀಡಿರುವ ತೋಮರ್, ಬೆಳೆ ವೈವಿಧ್ಯೀಕರಣ, ಶೂನ್ಯ ಬಂಡವಾಳದಲ್ಲಿ ಕೃಷಿ ಮತ್ತು ಪಾರದರ್ಶಕ ಕನಿಷ್ಠ ಬೆಂಬಲ ಬೆಲೆ ನೀತಿಗೆ ಸಂಬಂಧಿಸಿದ ವಿಚಾರಗಳ ಚರ್ಚೆ ಸಲುವಾಗಿ ಸಾಂವಿಧಾನಿಕ ಸಮಿತಿಯನ್ನು ಪ್ರಧಾನಿ ನರೇಂದ್ರ ಮೊದಿ ಘೋಷಿಸಿದ್ದಾರೆ. ರೈತ ಸಂಘಟನೆಗಳ ಪ್ರತಿನಿಧಿಗಳೂ ಸಮಿತಿಯಲ್ಲಿರಲಿದ್ದಾರೆ ಎಂದು ತೋಮರ್ ತಿಳಿಸಿದ್ದಾರೆ.
ಈ ಹಿಂದೆ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ್ಯ ಸುಡುವುದು ದೆಹಲಿ-ಎನ್‌ಸಿಆರ್ ಪ್ರದೇಶದ ವಾಯುಮಾಲಿನ್ಯಕ್ಕೆ ಕಾರಣ ಎನ್ನಲಾಗುತ್ತಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ರೈತ ಸಂಘಟನೆಗಳು, ಕಾರ್ಖಾನೆಗಳು, ವಾಹನಗಳು, ಹೊಗೆ ಉಗುಳುತ್ತಿವೆ. ದೀಪಾವಳಿಯ ವೇಳೆ ಪಟಾಕಿ ಸುಡುವುದರಿಂದ ವಿಷಾನಿಲ ಹೊರಹೊಮ್ಮುತ್ತಿದೆ. ಆದರೂ ಮುಗ್ಧ ರೈತರನ್ನೇ ದೂಷಿಸುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದ್ದವು.