ಬಂಟಕಲ್ಲು: ನೂತನ ಆಂಬುಲೆನ್ಸ್ ‘ಸೇವಕ’ ಲೋಕಾರ್ಪಣೆ

ಶಿರ್ವ (ಉಡುಪಿ ಟೈಮ್ಸ್ ವರದಿ): ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ನಾಗರಿಕ ಸೇವಾ ಸಮಿತಿ (ರಿ) ಇದರ ಮಹತ್ವಾಕಾಂಕ್ಷೆಯ ಯೋಜನೆಯಾದ ಬಂಟಕಲ್ಲು ಪರಿಸರದ ನಾಗರಿಕರಿಗೆ ತುರ್ತು ಸಂದರ್ಭದಲ್ಲಿ ಉಪಯೋಗವಾಗುವ ನಿಟ್ಟಿನಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ನೀಡುವ ಉದ್ದೇಶದಿಂದ ಖರೀದಿಸಿದ ನೂತನ ಆಂಬುಲೆನ್ಸ್ ವಾಹನ ‘ಸೇವಕ’ವನ್ನು ಸ್ಥಳೀಯ ಪಾಂಬೂರು ದೇವಾಲಯದ ಧರ್ಮಗುರು ವಂ. ಫಾ. ಹೆನ್ರಿ ಮಸ್ಕರೇನಸ್ ಆಶೀರ್ವದಿಸಿ, ಲೋಕಾರ್ಪಣೆಗೊಳಿಸಿದರು.


ಬಳಿಕ ಮಾತನಾಡಿದ ಅವರು, ಬಂಟಕಲ್ಲು ಪರಿಸರದ ಜನರಿಗೆ ಹಾಗೂ ಪರಿಸರದಲ್ಲಿ ನಡೆಯುತ್ತಿರುವ ಅಪಘಾತಗಳ ಸಂದರ್ಭದಲ್ಲಿ ನೆರವಾಗುವ ನಿಟ್ಟಿನಲ್ಲಿ ಬಂಟಕಲ್ ನಾಗರಿಕ ಸೇವಾ ಸಮಿತಿಯ ಯೋಜನೆಯ ತುಂಬಾ ಉತ್ತಮ ಹಾಗೂ ಉಪಯುಕ್ತವಾಗಿದೆ. ಇದಕ್ಕೆ ನಾಗರಿಕರ ಪರವಾಗಿ ಸಮಿತಿ ಸದಸ್ಯರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಶಿರ್ವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಾ. ಅರುಣ್ ಹೆಗ್ಡೆ, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಶಶಿಧರ್ ವಾಗ್ಲೆ, ಮುಖ್ಯ ಅತಿಥಿಯಾಗಿ ಆಗಮಿಸಿ ಸಮಿತಿಯ ಸಮಾಜ ಸೇವೆಯನ್ನು ಗುರುತಿಸಿ ಅಭಿನಂದಿಸಿದರು.


ಇದೇ ಸಂದರ್ಭದಲ್ಲಿ ಶಿರ್ವದ ಕೋರೊನ ವಾರಿಯರ್ಸ್  ಅಧಿಕಾರಿಗಳಾದ ಡಾ. ಸಂತೋಷ್ ಕುಮಾರ್ ಬೈಲೂರು, ಅನಂತ ಪದ್ಮನಾಭ ನಾಯಕ್, ವಿಜಯ ಕುಕ್ಯಾನ್ ಅವರನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.
ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಪಾಟ್ಕರ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಪ್ರಭು, ಪ್ರಮುಖರಾದ ರಾಮಕೃಷ್ಣ ಶರ್ಮಾ, ವಿಶ್ವನಾಥ ಹಾಗೂ ಯುವ ವೃಂದ ಹಾಗೂ ಬಂಟಕಲ್ಲು ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!