ಧಾರವಾಡ ಎಸ್ಡಿಎಂ ವೈದ್ಯಕೀಯ ಕಾಲೇಜ್- ಕೋವಿಡ್ ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆ
ಧಾರವಾಡ: ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಮತ್ತೆ 116 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 182ಕ್ಕೆ ಏರಿಕೆಯಾಗಿದೆ. ನಿನ್ನೆ 66 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿತ್ತು.
ಗುರುವಾರ ಸಂಜೆಯವರೆಗೆ ಎಸ್ ಡಿಎಂ ಆವರಣದ 690 ಜನರನ್ನು ಆರ್ಟಿಪಿಸಿಆರ್ ಹಾಗೂ ಆರ್ಎಟಿ ತಪಾಸಣೆಗೆ ಒಳಪಡಿಸಲಾಗಿದೆ. ಕಿಮ್ಸ್, ಡಿಮ್ಹಾನ್ಸ್ ಹಾಗೂ ಎಸ್ಡಿಎಂನ ಕೋವಿಡ್ ಪ್ರಯೋಗಾಲಯಗಳಲ್ಲಿ ಈ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಎಲ್ಲ ಸೊಂಕಿತರು ಹಿಂದೆಯೇ ಕೋವಿಡ್ ನಿರೋಧಕ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿದ್ದಾರೆ. ಯಾರಲ್ಲಿಯೂ ರೋಗದ ಗಂಭೀರ ಸ್ವರೂಪದ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾಲೇಜಿನ ಡಿ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಪಾಲಕರು ಕೂಡ ಭಾಗಿಯಾಗಿದ್ದರು. ಅವರೂ ಕೋವಿಡ್ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದ್ದಾರೆ. ಇದುವರೆಗೆ ಎಸ್ಡಿಎಂ ಆವರಣ ದಿಂದ ಹೊರಗೆ ಎಲ್ಲಿಯೂ ಪ್ರಕರಣಗಳೂ ವರದಿಯಾಗಿಲ್ಲ. ಹುಬ್ಬಳ್ಳಿ ಧಾರವಾಡ ಅವಳಿನಗರ ಹಾಗೂ ಜಿಲ್ಲೆಯ ಸಾರ್ವಜನಿಕರಲ್ಲಿ ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸ್ವ್ಯಾಬ್ ನೀಡಿ, ಕೋವಿಡ್ ತಪಾಸಣೆ ಮಾಡಿಸಿ ಕೊಳ್ಳಬೇಕು. ಕೋವಿಡ್ ನಿಯಂತ್ರಣಕ್ಕೆ ಈ ಮುನ್ನೆಚ್ಚರಿಕೆಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.