ಧಾರವಾಡ ಎಸ್ ಡಿಎಂ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್: 2 ಹಾಸ್ಟೆಲ್ ಸೀಲ್ಡೌನ್
ಧಾರವಾಡ: ಧಾರವಾಡ ಬಳಿಯಿರುವ ಎಸ್ಡಿಎಂ ವೈದ್ಯಕೀಯ ಕಾಲೇಜಿನ 66 ವಿದ್ಯಾರ್ಥಿಗಳಲ್ಲಿ ಬುಧವಾರ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ.
ಕಳೆದ 17ನೇ ತಾರೀಖಿನಂದು ಕಾಲೇಜಿನ ಆವರಣದ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಹಲವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಈಗಾಗಲೇ 300 ವಿದ್ಯಾರ್ಥಿಗಳ ಕೋವಿಡ್ ತಪಾಸಣೆ ವರದಿ ಬಂದಿದ್ದು, 66 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಉಳಿದ 100 ವಿದ್ಯಾರ್ಥಿಗಳ ಮೂಗು ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗಿದೆ. ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ತಪಾಸಣೆಗೆ ಒಳಪಟ್ಟವರನ್ನೂ ಕ್ವಾರಂಟೈನ್ ಮಾಡಲಾಗಿದೆ‘ ಎಂದು ಮಾಹಿತಿ ನೀಡಿದರು.
’ಜಿಲ್ಲಾಡಳಿತ, ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಪೊಲೀಸ್ ಹಾಗೂ ಎಸ್ಡಿಎಂ ಆಡಳಿತ ಮಂಡಳಿ ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿವೆ. ಸದ್ಯ ಸೋಂಕು ವಿದ್ಯಾರ್ಥಿಗಳಲ್ಲಿ ಮಾತ್ರ ಕಾಣಿಸಿಕೊಂಡಿರುವುದರಿಂದ ಈ ವಲಯದಲ್ಲಿ ನಿಯಂತ್ರಿಸಲಾಗುತ್ತಿದೆ. ಕಾಲೇಜಿನ ವೈದ್ಯಕೀಯ ವಿಭಾಗವು ತೀವ್ರ ನಿಗಾವಹಿಸಿ, ಚಿಕಿತ್ಸೆ, ಔಷಧೋಪಚಾರ ನೀಡುತ್ತಿದೆ‘ ಎಂದು ಜಿಲ್ಲಾಧಿಕಾರಿ ಹೇಳಿದರು.
ನ. 17ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಪ್ರಾಥಮಿಕ ಹಾಗೂ ನಂತರದಲ್ಲಿ ಸಂಪರ್ಕಕ್ಕೆ ಬಂದವರ ಕೋವಿಡ್ ತಪಾಸಣೆಗೆ ಒಳಪಟ್ಟು ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು. ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಸಾಧ್ಯವಾದಷ್ಟು ಕೈ ಬಿಡುವುದು ಉತ್ತಮ. ಅನಿವಾರ್ಯವಿದ್ದರೆ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸುರಕ್ಷಿತ ಅಂತರದ ನಿಯಮಗಳನ್ನು ಪಾಲಿಸಬೇಕು. ಜನಸಂದಣಿಯಾಗದಂತೆ ಎಚ್ಚರ ವಹಿಸಬೇಕು‘ ಎಂದು ಸೂಚಿಸಿದ್ದಾರೆ.