ಬಟ್ಟೆಬರೆಗಳು, ಪಾದರಕ್ಷೆಗಳ ಜಿ.ಎಸ್.ಟಿ ತೆರಿಗೆ 12 ಶೇ.ಕ್ಕೆ ಏರಿಸಲು ನಿರ್ಧಾರ

ಹೊಸದಿಲ್ಲಿ ನ.24: ದೇಶದಲ್ಲಿ ಬಟ್ಟೆಬರೆಗಳು ಹಾಗೂ ಪಾದರಕ್ಷೆಗಳ ಜಿ.ಎಸ್.ಟಿ ತೆರಿಗೆ 5 ಶೇ. ದಿಂದ 12 ಶೇ. ಕ್ಕೆ ಏರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂಬ ಸುದ್ದಿಯೊಂದು ವರದಿಯಾಗಿದೆ.

ವರದಿ ಪ್ರಕಾರ 2022 ರ ಜ.1 ರಿಂದ ಬಟ್ಟೆ ಬರೆಗಳು ಹಾಗೂ ಪಾದರಕ್ಷೆಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಎರಡೂ ಉತ್ಪನ್ನಗಳ ಬೆಲೆಯೇರಿಕೆಯಾಗಲಿದೆ. ಈ ಎರಡೂ ಉತ್ಪನ್ನಗಳ ತಯಾರಿಗೆ ಬೇಕಾಗಿರುವ ಕಚ್ಛಾ ವಸ್ತುಗಳ ಮೇಲಿನ ತೆರಿಗೆ ಅಂತಿಮ ಉತ್ಪನ್ನದ ಮೇಲಿನ ತೆರಿಗೆಗಿಂತ ಹೆಚ್ಚಾಗಿದ್ದು, ಈ ಹಿಂದೆ ರೂ. 1000 ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗಿತ್ತು. ಆದರೆ  ಮುಂದಿನ ವರ್ಷದಿಂದ ಯಾವುದೇ ಬೆಲೆಯ ಪಾದರಕ್ಷೆ ಮೇಲೆ ಶೇ. 12ರಷ್ಟು ಜಿಎಸ್‌ಟಿ ಪಾವತಿಸಬೇಕಿದೆ.

ಇದರೊಂದಿಗೆ ಎಲ್ಲಾ ರೀತಿಯ ಫ್ಯಾಬ್ರಿಕ್‌ ಗಳಾದ ಸಿಲ್ಕ್, ಕಾಟನ್, ಉಣ್ಣೆ, ಸೆಣಬು ಇವುಗಳ ಮೇಲೆ ಶೇ 12ರಷ್ಟು ಜಿಎಸ್‌ಟಿ ಇದ್ದರೆ ಸಿಂಥಟಿಕ್ ಫೈಬರ್ ಯಾರ್ನ್ ಮೇಲಿನ ಜಿಎಸ್‌ಟಿ ಅನ್ನು ಶೇ.12 ಗೆ ಕಡಿಮೆಗೊಳಿಸಲಾಗಿದೆ. ಈ ಬಗ್ಗೆ ರಿಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ಕೇಂದ್ರ ಸರಕಾರದ ನಿರ್ಧಾರದಿಂದ ತಮಗೆ ಆಘಾತವಾಗಿದೆ. ದೇಶದಲ್ಲಿ ಕೃಷಿ ನಂತರ ಹೆಚ್ಚು ಆದಾಯ ತರುವ ವಸ್ತುವಾದ ಬಟ್ಟೆಬರೆಗಳ ಮೇಲೆ ಶೇ.12ರಷ್ಟು ತೆರಿಗೆ ಸಮರ್ಥನೀಯವಲ್ಲ ಎಂದು  ಹೇಳಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸೋಸಿಯೇಶನ್ ಸಿಇಒ ಕುಮಾರ್ ರಾಜಗೋಪಾಲನ್ ಅವರು, ಈಗಾಗಲೇ ಸಾಕಷ್ಟು ಸಮಸ್ಯೆಯಿರುವ ಈ ಕ್ಷೇತ್ರದ ಮೇಲೆ ಶೇ.12 ದಷ್ಟು ಜಿಎಸ್‌ಟಿ ಏರಿಕೆ ಇನ್ನಷ್ಟು ಹೊರೆ ಸೃಷ್ಟಿಸಲಿದೆ. ಇದರಿಂದ ಬೆಲೆ ಹೆಚ್ಚಾದಂತೆ ಬೇಡಿಕೆ ಕೂಡ ಕಡಿಮೆಯಾಗಲಿದೆ. ಮುಂದೆ ಇದರಿಂದಾಗಿ ಹಲವು ಅಸಂಘಟಿತ ವಲಯದ ಉದ್ಯಮಗಳು ಜಿಎಸ್‌ಟಿ ಪರಿಧಿಯ ಹೊರಗೆ ಹೋಗಬಹುದು,” ಎಂದು  ಹೇಳಿರೋದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!