ಲಾಕ್‌ಡೌನ್ ನಿಯಮ ಪಾಲಿಸಿ: ಸಿಎಂ, ಡಿಸಿಎಂ ಮತ್ತು ಸಚಿವರ ಮನವಿ
ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ನಿನ್ನೆ ರಾತ್ರಿ 8 ಗಂಟೆಯಿಂದ ಮುಂದಿನ ಬುಧವಾರ ಬೆಳಗ್ಗೆ 5 ಗಂಟೆವರೆಗೆ ಸಂಪೂರ್ಣ ಲಾಕ್ ಡೌನ್ ಆಗಿರಲಿದೆ. ಅಗತ್ಯಸೇವೆಗಳು ಲಭ್ಯವಿರಲಿದ್ದು ನಾಗರಿಕರು ಆತಂಕಕ್ಕೆ ಒಳಗಾಗದೆ ನಿಯಮಗಳನ್ನು ಪಾಲಿಸಬೇಕು, ಮುನ್ನೆಚ್ಚರಿಕೆ ವಹಿಸಬೇಕು, ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ವೈದ್ಯಕೀಯ ಶಿಕ್ಷ ಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ನನ್ನ ಆತ್ಮೀಯ ನಾಗರಿಕ ಬಂಧುಗಳೇ, ನಿಮ್ಮ ಹಾಗೂ ನಿಮ್ಮ ಕುಟುಂಬದ ಸುರಕ್ಷತೆಗಾಗಿ ಲಾಕ್‌ಡೌನ್ ನಿಯಮ ಪಾಲಿಸಿ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ, ಕೊರೊನಾ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಡೋಣ, ಸಾಂಕ್ರಾಮಿಕ ಹರಡುವುದನ್ನು ತಡೆಯೋಣ ಎಂದು ಮನವಿ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಟ್ವೀಟ್ ಮಾಡಿ, ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿಯೇ ಇರಿ. ಅಗತ್ಯ ಸಾಮಗ್ರಿಗಳು ಲಭಿಸಲು ಯಾವುದೇ ತೊಂದರೆಯಿಲ್ಲ. ಹಾಗಾಗಿ ಅನಗತ್ಯವಾಗಿ ಗುಂಪು ಸೇರುವುದು ಬೇಡ. ನೈರ್ಮಲ್ಯದ ಕ್ರಮಗಳನ್ನು ಅನುಸರಿಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.