ವಿಕ್ರಂ ಹಾಗೂ ಅಪೊಲೋ ಆಸ್ಪತ್ರೆಗಳ ಓಪಿಡಿ ಬಂದ್: ಬೆಂಗಳೂರು ಡಿಸಿ ಆದೇಶ
ಬೆಂಗಳೂರು: ಕೋವಿಡ್ ಸೋಂಕಿತರಿಗೆ ಸರ್ಕಾರ ನಿಗದಿ ಮಾಡಿದ ಶೇ 50 ರಷ್ಟು ಬೆಡ್ ನೀಡಲು ನಿರಾಕರಿಸಿದ ಹಿನ್ನಲೆಯಲ್ಲಿ ಪ್ರತಿಷ್ಟಿತ ಎರಡು ಆಸ್ಪತ್ರೆಗಳ ಹೊರ ರೋಗಿಗಳ ಚಿಕಿತ್ಸೆಯನ್ನು ಸ್ಥಗಿತ ಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ವಸಂತ ನಗರದಲ್ಲಿರುವ ಪ್ರತಿಷ್ಟಿತ ವಿಕ್ರಂ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ಅಪೊಲೋ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಅಧಿಕೃತ ಜ್ಞಾಪನಾಪತ್ರವನ್ನು ರವಾನಿಸಿದ್ದಾರೆ.
ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಆದ ಮಾತುಕತೆ ಪ್ರಕಾರ ಸರ್ಕಾರಕ್ಕೆ ಶೇ 50ರಷ್ಟು ಬೆಡ್ ನೀಡಲು ಕಳೆದ ವಾರವಷ್ಟೇ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ನೀಡಿದ್ದವು.ಆದರೆ ಇದುವರೆಗೂ ತಮ್ಮಲ್ಲಿರುವ ಬೆಡ್ ಗಳ ಮಾಹಿತಿ, ಕೋವಿಡ್ ಸೋಂಕಿತರನ್ನು ದಾಖಲಿಸಿಕೊಂಡಿರುವ ವಿಷಯ,ಇಂತಿಷ್ಟು ಬೆಡ್ ಗಳನ್ನು ನೀಡುವ ಬಗ್ಗೆ ಮಾಹಿ ತಿ ನೀಡದ ಹಿನ್ನಲೆಯಲ್ಲಿ ನಿನ್ನೆ ಜಿಲ್ಲಾಧಿಕಾರಿಗಳು ಈ ಎರಡು ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ನೀಡಿದ್ದರು.
24 ಗಂಟೆಗಳ ಒಳಗಾಗಿ ಜಿಲ್ಲಾಡಳಿತಕ್ಕೆ ಸ್ಪಷ್ಟ ಕಾರಣ ಕೇಳಿ ನೋಟೀಸ್ ನೀಡಿತ್ತು.ಆದರೆ ನೋಟೀಸಿಗೆ ಉತ್ತರಿಸದಿರುವ ಹಿನ್ನಲೆಯಲ್ಲಿ ತಡರಾತ್ರಿ ಬಿಬಿಎಂಪಿ ಅಧಿಕಾರಿಗಳು ಎರಡೂ ಆಸ್ಪತ್ರೆಗಳಿಗೆ ಬೇಟಿ ನೀಡಿ ಆಡಳಿತ ಮಂಡ ಳಿ ಜೊತೆ ಮಾತುಕತೆ ನಡೆಸಿ ತಕ್ಷಣ ಬೆಡ್ ಗಳನ್ನು ನೀಡುವಂತೆ ಸೂಚಿಸಿದ್ದರು.
ಇಷ್ಟಾದರೂ ಎಚ್ಚೆತ್ತುಕೊಳ್ಳದ ಖಾಸಗಿ ಆಸ್ಪತ್ರೆಗಳ ವಿರುದ್ಧ ಹೊರ ರೋಗಿಗಳ ಚಿಕಿತ್ಸೆ ಬಂದ್ ಮಾಡುವಂತೆ ಸೂಚಿಸಿದ್ದಾರೆ.ಇದನ್ನೂ ಉಲ್ಲಂಘಿಸಿದರೆ ಆಸ್ಪತ್ರೆಯನ್ನು ವಿಪತ್ತು ನಿರ್ವಹಣಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ರವಾನಿಸಿದ್ದಾರೆ.