ಶಾಲಾ ಚಟುವಟಿಕೆಗೆ ಆನ್‌ಲೈನ್ ಕ್ಲಾಸ್: ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ
ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಶಾಲಾ ಮಕ್ಕಳು ವಿದ್ಯಾಭ್ಯಾಸದಿಂದಾಗಿ ವಂಚಿತರಾಗಬಾರದು ಎಂದಿರುವ ಕೇಂದ್ರ ಸರ್ಕಾರ ಆನ್‌ಲೈನ್ ಕ್ಲಾಸ್ ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ‘ಕೊರೋನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆ ದೇಶಾದ್ಯಂತ ಆನ್ಲೈನ್ ತರಗತಿಗಳ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಡಿಜಿಟಲ್ ಶಿಕ್ಷಣಕಾಗಿ ನೂತನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಅಲ್ಲದೆ ಜೊತೆಗೆ ಆನ್ಲೈನ್ ತರಗತಿಗಳ ಸಮಯವನ್ನು ಕೂಡ ಸೀಮಿತಗೊಳಿಸಿದೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯ ಸಮಯ 30 ನಿಮಿಷಗಳನ್ನು ಮೀರಬಾರದು. 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಶೈಕ್ಷಣಿಕ ಕ್ಯಾಲೆಂಡರ್ ಅಳವಡಿಸಿಕೊಳ್ಳಲು ಮಾರ್ಗಸೂಚಿ ಸೂಚಿಸಿದೆ.
1 ರಿಂದ 12ನೇ ತರಗತಿಗಳ ಸಮಯಾವಕಾಶ
ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು 30 ನಿಮಿಷ ಮೀರಬಾರದು. ಇದನ್ನು ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಒಂದರಿಂದ ಎಂಟನೇ ತರಗತಿಗಳಿಗೆ ತಲಾ 45 ನಿಮಿಷಗಳ ಎರಡು ಆನ್‌ಲೈನ್ ಸೆಷನ್‌ಗಳು ಮಾತ್ರ ಇರಬೇಕು ಹಾಗೂ 9 ರಿಂದ 12 ನೇ ತರಗತಿಗಳಿಗೆ ನಾಲ್ಕು ಆನ್ಲೈನ್ ಸೆಷನ್‌ಗಳು ನಡೆಯಲಿವೆ.
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರು, ಕೊರೋನಾ ಸಾಂಕ್ರಾಮಿಕ ಅಷ್ಟು ಸುಲಭವಾಗಿ ಶೀಘ್ರ ಮುಕ್ತಾಯವಾಗುತಂಹುದಲ್ಲ. ಹೀಗಾಗಿ ನಮ್ಮ ಶೈಕ್ಷಣಿಕ ವ್ಯವಸ್ಥೆ ಬದಲಾದ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಶಾಲೆಗಳು ಇಲ್ಲಿಯವರೆಗಿನ ಬೋಧನೆ ಮತ್ತು ಕಲಿಕೆಯ ವಿಧಾನವನ್ನು ಮರುರೂಪಿಸಬೇಕು. ಲಾಕ್‌ಡೌನ್‌ನಿಂದಾಗಿ ಪ್ರಸ್ತುತ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್, ಸಂಯೋಜಿತ, ಡಿಜಿಟಲ್ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮೂಲಕ ಕಲಿಯುವವರ ದೃಷ್ಟಿಕೋನದಿಂದ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಡಿಜಿಟಲ್ ಶಿಕ್ಷಣದ ಈ ಮಾರ್ಗಸೂಚಿಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ಮಾರ್ಚ್ 16ರಿಂದ ಕೊರೋನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಅಲ್ಲದೆ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಗಳೂ ಕೂಡ ಬಂದ್ ಆಗಿದ್ದವು. ಮಾರ್ಚ್ 24ರಿಂದ ಲಾಕ್ ಡೌನ್ ಘೋಷಣೆಯಾಗಿತ್ತು. ಆ ಬಳಿಕ ನಿಧಾನವಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ನಿಯಮವಾಳಿಗೆ ರಿಯಾಯಿತಿ ನೀಡಿತ್ತಾದರೂ, ಶಾಲಾ-ಕಾಲೇಜುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.