ಡಿಕೆ ಎಂದು ಕೂಗಿ ಕಾಂಗ್ರೆಸ್’ಗೆ ದ್ರೋಹ ಮಾಡುತ್ತೀರಾ,ಇಲ್ಲಿ ವ್ಯಕ್ತಿ ಪೂಜೆ ಇಲ್ಲ ಪಕ್ಷದ ಪೂಜೆ ಅಷ್ಟೇ- ಡಿಕೆಶಿ
ಬೆಂಗಳೂರು: ಪಕ್ಷದ ನಾಯಕರನ್ನು ಆರಾಧಿಸುವ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಭಾನುವಾರ ಕಿವಿಮಾತು ಹೇಳಿದ್ದಾರೆ.
ನಿನ್ನೆಯಷ್ಟೇ ರಾಜ್ಯ ಕಾಂಗ್ರೆಸ್ ಘಟಕ ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರು ಅವರ ಜನ್ಮದಿನಾಚರಣೆ ಆಚರಿಸಿತು. ಇದೇ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೂ ಚಾಲನೆ ನೀಡಿತು. ಅರಮನೆ ಮೈದಾನದಲ್ಲಿ ರಾಜ್ಯ ಕಾಂಗ್ರೆಸ್ ಘಟಕ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ವೇದಿಕೆಗೆ ಡಿಕೆ.ಶಿವಕುಮಾರ್ ಅವರು ಬರುತ್ತಿದ್ದಂತೆಯೇ ಕಾರ್ಯಕರ್ತರು ಡಿಕೆ.. ಡಿಕೆ.. ಎಂದು ಕೂಗಿದರು.
ಇದರಿಂದ ಕೋಪಗೊಂಡ ಶಿವಕುಮಾರ್ ಅವರು, ಯಾರು ಸಹ ಡಿಕೆಶಿ ಅಂತ ಕೂಗಬಾರದು. ಹಾಗೇ ಕೂಗಿದರೆ ಹೊರಗೆ ಎದ್ದು ಹೋಗಿ ಎಂದು ಖಾರವಾಗಿಯೇ ಹೇಳಿದರು. ಡಿಕೆ ಎಂದು ಕೂಗಿ ಕಾಂಗ್ರೆಸ್ ಗೆ ದ್ರೋಹ ಮಾಡುತ್ತೀ ಇದ್ದೀರ, ಇಲ್ಲಿ ಯಾರು ಡಿಕೆಶಿ ಅಂತ ಕೂಗಬಾರದು. ನಾನು ಮೊದಲೇ ಹೇಳಿದ್ದೀನಿ, ಇಲ್ಲಿ ವ್ಯಕ್ತಿ ಪೂಜೆ ಇಲ್ಲ ಪಕ್ಷದ ಪೂಜೆ ಅಷ್ಟೇ. ಡಿಕೆಶಿ ಅಂತ ಕೂಗಿದರೆ ಪಕ್ಷಕ್ಕೆ ದ್ರೋಹ ಮಾಡಿದ ಹಾಗೇ ಎಂದು ಗರಂ ಆದರು.
ಬಳಿಕ ಕಾರ್ಯಕ್ರಮದ ಕುರಿತು ಮಾತನಾಡಿ, ನೆಹರೂ ಅವರು ದೇಶದ ಮೊದಲ ಪ್ರಧಾನಿ ಮಾತ್ರವಲ್ಲ, ಬ್ರಿಟಿಷರ ವಿರುದ್ಧ ಹೋರಾಡಿ ಒಂಬತ್ತೂವರೆ ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರೂ ಕೂಡ ಹೌದು. ಅವರಿಗೆ ಸಂವಿಧಾನ ಮುಖ್ಯವೇ ಹೊರತು ಜನರ ಧಾರ್ಮಿಕ ಹಿನ್ನೆಲೆಯಲ್ಲ ಎಂದರು.
ಇಂದು ಪಕ್ಷದ ಸದಸ್ಯತ್ವವನ್ನು ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದ್ದೇವೆ. ತುಂಬಾ ಸಂತೋಷ ಆಗುತ್ತಿದೆ. ಕಾಂಗ್ರೆಸ್ ಅಂತ ಹೇಳಿದರೆ ಹೋರಾಟ, ದೇಶಗಳಲ್ಲಿ ಕಾಂಗ್ರೆಸ್ ಹೋರಾಟಕ್ಕೆ ದೊಡ್ಡ ಇತಿಹಾಸವಿದೆ. ಸದಸ್ಯತ್ವ ನೊಂದಣಿ ಕಾರ್ಯಕ್ರಮ ಬಹಳ ಹಳೆಯದು ಎಂದು ಹೇಳಿದರು. ಇನ್ನು ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ವ್ಯಾಕ್ಸಿನೇಟ್ ಕರ್ನಾಟಕ ಕಾರ್ಯಕ್ರಮ ನಡೆಸಿತು. ಕೋವಿಡ್ ಹೆಚ್ಚಾದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಾಕ್ಸಿನ್ ಕೊಡುವಾಗ ವಿಫಲವಾಗಿತ್ತು. ಕೋವಿಡ್ ಸಂದರ್ಭದಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗಿತ್ತು. ನಾವೆಲ್ಲರೂ ಸರ್ಕಾರಕ್ಕೆ ಸಹಕಾರ ನೀಡಿದೆವು. ಆದರೆ ಅವರು ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ. ಹಾಗಾಗಿ ನಾವು ಜನರ ಪರವಾಗಿದ್ದೇವೆ ಅಂತ ಹೋರಾಟ ಮಾಡಿದೆವು ಎಂದು ತಿಳಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ನೆಹರೂ ಅವರು ಮಕ್ಕಳನ್ನು ಪ್ರೀತಿಸುತ್ತಿದ್ದರು, ಏಕೆಂದರೆ ಮಕ್ಕಳು ಮತ್ತು ಯುವಕರು ಮಾತ್ರ ರಾಷ್ಟ್ರವನ್ನು ಪರಿವರ್ತಿಸುತ್ತಾರೆ. ನೆಹರು, ಮಹಾತ್ಮಾ ಗಾಂಧಿ, ಮೌಲಾನಾ ಅಬುಲ್ ಕಲಾಂ ಮತ್ತು ಸುಭಾಷ್ ಚಂದ್ರ ಬೋಸ್ ಅವರು ಹಲವಾರು ವರ್ಷಗಳ ಜೈಲುವಾಸವನ್ನು ಹೇಗೆ ಕಳೆದರು ಎಂಬುದನ್ನು ಇದೇ ವೇಳೆ ಸ್ಮರಿಸಿದರು. ಸಂಜೆ ನಡೆದ ಹೈದರಾಬಾದ್-ಕರ್ನಾಟಕ ವಿಭಾಗದ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ, ಸುರ್ಜೇವಾಲಾ, ಎಐಸಿಸಿ ಕಾರ್ಯದರ್ಶಿ ರಮೀಂದರ್ ಸಿಂಗ್ ಓಲಾ, ಪರಿಷತ್ ವಿಪಕ್ಷ ನಾಯಕ ಎಸ್‌ಆರ್ ಪಾಟೀಲ್, ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರು ಪಾಲ್ಗೊಂಡಿದ್ದರು