ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗದ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿಸಲು ಕರವೇ ಮನವಿ

ಉಡುಪಿ ನ.10(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿರುವ ನೌಕರರಿಗೆ ವೇತನ ಪಾವತಿಸಲು ಕೂಡಲೇ ವ್ಯವಸ್ಥೆ ಮಾಡುವಂತೆ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ, ಬ್ರಹ್ಮಾವರ  ಹಾಗೂ ಹೆಬ್ರಿ ತಾಲೂಕು ಘಟಕ ಜಿಲ್ಲಾಧಿಕಾರಿಯರಲ್ಲಿ ಮನವಿ ಮಾಡಿಕೊಂಡಿದೆ.

ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗದ ಸಿಬ್ಬಂದಿಗಳಿಗೆ ವೇತನ ಬಾಕಿ ಇರುವುದರಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಮನಗಂಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಜಯ ಅವರು ಶೀಘ್ರವಾಗಿ ಡಯಾಲಿಸಿಸ್ ಘಟಕದ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಿ ಡಯಾಲಿಸಿಸ್ ಕೇಂದ್ರವನ್ನು ಮುಚ್ಚುಗಡೆ ಮಾಡುವುದನ್ನು ತಡೆಯುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕಳೆದ ಸುಮಾರು ನಾಲ್ಕು ತಿಂಗಳುಗಳಿಂದ ಜಿಲ್ಲಾಸ್ಪತ್ರೆಯ 11 ಮಂದಿ ಡಯಾಲಿಸಿಸ್ ವಾರ್ಡಿನ ನೌಕರರಿಗೆ ಯಾವುದೇ ವೇತನ ಪಾವತಿಯಾಗದ ಕಾರಣ ಈ ಡಯಾಲಿಸಿಸ್ ಕೇಂದ್ರದಲ್ಲಿ ಪರಿಣತ ನೌಕರರ ಜೀವನಕ್ಕೆ ಕಷ್ಟವಾಗಿದ್ದು, ಪರಿಸ್ಥಿತಿ ಶೋಚನೀಯವಾಗಿದೆ. ಆದರೂ ಈ ನೌಕರರು ಮಾನವೀಯತೆಯ ಆಧಾರದಲ್ಲಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.

ಇದರಿಂದಾಗಿ ಉಡುಪಿ ಜಿಲ್ಲೆಯಲ್ಲಿರುವ ಬಡರೋಗಿಗಳಿಗೆ ಬಹಳಷ್ಟು ಸಹಾಯವಾಗುತ್ತಿದೆ. ಈಗ ಏಕಾಏಕಿ ಡಯಾಲಿಸಿಸ್ ಕೇಂದ್ರವನ್ನು ನಿಲುಗಡೆಗೊಳಿಸಲು ಕೆಲವು ಸ್ವಹಿತಾಸಕ್ತಿ ಕೇಂದ್ರಗಳು ಮತ್ತು ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಉಡುಪಿ ಜಿಲ್ಲೆಯ ಬಡರೋಗಿಗಳು ಕಂಗಾಲಾಗಿದ್ದಾರೆ. ಇನ್ನು ರೋಗಿಯು ಡಯಾಲಿಸಿಸ್ ಮಾಡಿಸಬೇಕಾದರೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗುತ್ತದೆ. ಮಾತ್ರವಲ್ಲದೆ  ರೋಗಿಯು ಪ್ರತಿ ಬಾರಿ ಡಯಾಲಿಸಿಸ್‌ ಮಾಡಿಸಲು ಸುಮಾರು 1,500 ರಿಂದ 2,000 ರೂ.ರವರೆಗೆ ವೆಚ್ಚ ಭರಿಸಬೇಕಾಗಿದೆ. ಅಲ್ಲದೆ ಪ್ರತಿ ರೋಗಿಯು 2-3 ದಿನಗಳಿಗೊಮ್ಮೆ ಡಯಾಲಿಸಿಸ್ ಮಾಡಿಸಿ ಕೊಳ್ಳಬೇಕಾಗುತ್ತದೆ.

ಅಂದರೆ ತಿಂಗಳಿಗೆ ಸುಮಾರು ರೂ.12,000 ದಿಂದ 15,000‌ ರೂ.ಗಳಷ್ಟು ವ್ಯಯಿಸಬೇಕಾಗಿದೆ. ಇದು ಬಡ ಕುಟುಂಬಗಳಿಗೆ ಅಸಾಧ್ಯವಾದ ಮಾತಾಗಿದ್ದು, ಅಂತಹ ರೋಗಿಗಳನ್ನು ಅಪಾಯಕ್ಕೆ ನೂಕಿದಂತಾಗುವುದು. ಆದುದರಿಂದ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿರುವ ನೌಕರರಿಗೆ ವೇತನ ಪಾವತಿಸಲು ಕೂಡಲೇ ವ್ಯವಸ್ಥೆ ಮಾಡಬೇಕಾಗಿದೆ ಮತ್ತು ಡಯಾಲಿಸಿಸ್ ಕೇಂದ್ರವನ್ನು ಮುಚ್ಚುಗಡೆ ಮಾಡುವುದನ್ನು ತಡೆಯಬೇಕಾಗಿದೆ ಎಂದು ಮನವಿ ಮಾಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!