ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗೆ ಬೆಂಬಲ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಣಯ ಅಂಗೀಕಾರ
ಜೈಪುರ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಎದುರಾಗಿದ್ದ ಬಿಕ್ಕಟ್ಟು ಸದ್ಯಕ್ಕೆ ಶಮನವಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಾಯಕತ್ವ ಬೆಂಬಲಿಸುವ ನಿರ್ಣಯ ಕೈಗೊಂಡಿದೆ.
ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಇಂದು ಸಿಎಂ ಮನೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು.
ಕಾಂಗ್ರೆಸ್ ತನ್ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿ, ಶಾಸಕಾಂಗ ಸಭೆಯಲ್ಲಿ ಎಲ್ಲರೂ ಹಾಜರಾಗುವುದನ್ನು ಕಡ್ಡಾಯಗೊಳಿಸಿತ್ತು. ಹೀಗಾಗಿ ಸಭೆಯಲ್ಲಿ 96 ಶಾಸಕರು ಭಾಗಿಯಾಗಿದ್ದು, ಅಶೋಕ್ ಗೆಹ್ಲೋಟ್ ಬೆಂಬಲಿಸುವ ನಿರ್ಣಯ ಕೈಗೊಂಡಿದ್ದಾರೆ.
ಸಚಿನ್ ಪೈಲಟ್ ಅವರೊಂದಿಗೆ 30ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ವರದಿಯಾಗಿತ್ತು. ಆದರೆ ಪೈಲಟ್ ಮತ್ತು ಇತರೆ 16 ಶಾಸಕರು ಮಾತ್ರ ಇಂದಿನ ಶಾಸಕಾಂಗ ಸಭೆಗೆ ಗೈರು ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ಅವಿನಾಶ್ ಪಾಂಡೆ ಅವರು ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಸರ್ಕಾರಕ್ಕೆ 109 ಶಾಸಕರು ತಮ್ಮ ನಿಷ್ಠೆಯನ್ನು ತೋರಿ ಪತ್ರಗಳಿಗೆ ಸಹಿ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲಾ ಶೀಘ್ರದಲ್ಲೇ ಪತ್ರಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಪಾಂಡೆ ಪ್ರತಿಪಾದಿಸಿದ್ದಾರೆ.
‘ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಪಕ್ಷದ ಎಲ್ಲ ಶಾಸಕರು ನಮ್ಮೊಂದಿಗಿದ್ದಾರೆ.’ ಎಂದು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 107 ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಬಲ 72ರಷ್ಟಿದೆ.
ಈ ಮಧ್ಯೆ,ರಾಜಸ್ಥಾನದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಅವಕಾಶ ಸಿಗಬಹುದೇ ಎಂಬುದನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದರೆ ಪಕ್ಷ ಯಾವುದೇ ಹೆಜ್ಜೆ ಇಡಲು ಇನ್ನೂ ಸಿದ್ಧವಾಗಿಲ್ಲ ಎಂದು ಮೂಲವೊಂದು ತಿಳಿಸಿದೆ. ‘ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಈ ಬೆಳವಣಿಗೆ ಇನ್ನೂ ಬಿಜೆಪಿಗೆ ಹೊಂದುವಂತೆ ಕಾಣಿಸುತ್ತಿಲ್ಲ.’ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.