ಇರಾಕ್ ಪ್ರಧಾನಿ ಮನೆ ಮೇಲೆ ಡ್ರೋನ್ ದಾಳಿ-ಪ್ರಾಣಾಪಾಯದಿಂದ ಪಾರು
ಬಾಗ್ದಾದ್, ನ.7: ಇಂದು ಬೆಳ್ಳಂಬೆಳಗ್ಗೆ ಇರಾಕ್ ಪ್ರಧಾನಿ ಮುಸ್ತಫಾ ಅಲ್ ಕಧಿಮಿ ಅವರ ಮನೆ ಮೇಲೆ ಡ್ರೋನ್ ದಾಳಿ ನಡೆದಿದ್ದು, ಅನೇಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಇರಾಕ್ ಪ್ರಧಾನಿ ಮುಸ್ತಫಾ ಅಲ್-ಕಧಿಮಿ ಬಾಗ್ದಾದ್ ನಲ್ಲಿರುವ ಮನೆಯ ಮೇಲೆ ಡ್ರೋನ್ ದಾಳಿಯಾಗಿದ್ದು, ಪ್ರಧಾನಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಸುರಕ್ಷಿತವಾಗಿದ್ದು, ಜನರು ಶಾಂತಿಯಿಂದ ಇರುವಂತೆ ಖದೀಮಿ ಅವರ ಟ್ವಿಟರ್ ಖಾತೆಯಿಂದ ಮನವಿ ಮಾಡಲಾಗಿದೆ. ಖದೀಮಿ ನಿವಾಸದಲ್ಲಿ ಕನಿಷ್ಠ ಒಂದು ಸ್ಫೋಟ ಸಂಭವಿಸಿದೆ ಎಂದು ಇಬ್ಬರು ಉನ್ನತ ಸರಕಾರಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಪ್ರಧಾನಿ ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಸಂಘಟನೆಗಳು ದಾಳಿಯ ಹೊಣೆ ವಹಿಸಿಕೊಂಡಿಲ್ಲ.ಈ ಪ್ರದೇಶದಲ್ಲಿ ಸ್ಫೋಟಗಳು ಮತ್ತು ಬಂದೂಕಿನಿಂದ ಗುಂಡು ಸಿಡಿದ ಸದ್ದು ಕೇಳಿಬಂದಿದೆ ಎಂದು ಸರಕಾರಿ ಕಟ್ಟಡಗಳು ಮತ್ತು ವಿದೇಶಿ ರಾಯಭಾರ ಕಚೇರಿಗಳನ್ನು ಹೊಂದಿರುವ ಹಸಿರು ವಲಯದಲ್ಲಿರುವ ಪಾಶ್ಚಿಮಾತ್ಯ ರಾಜತಾಂತ್ರಿಕರು ಹೇಳಿದ್ದಾರೆ. ಸಂಸದೀಯ ಅಧಿಕಾರಕ್ಕೆ ಹೊಡೆತ ನೀಡಲಾಗಿದೆ ಎನ್ನಲಾದ ಸಾರ್ವತ್ರಿಕ ಚುನಾವಣೆಯನ್ನು ವಿರೋಧಿಸಿ ಇತ್ತೀಚೆಗೆ ಇರಾನ್ ಪರವಾಗಿರುವ ಸಶಸ್ತ್ರ ಗುಂಪುಗಳು ಹಸಿರು ವಲಯದಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದವು.