| ಡೆನ್ಮಾರ್ಕ್ ನ.5 : ಮುಂದಿನ ಕೆಲ ವಾರಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹೊಸ ಅಲೆ ವ್ಯಾಪಿಸುವ ಅಪಾಯ ಇರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ ಯೂರೋಪ್ ಮತ್ತು ಕೇಂದ್ರ ಏಷ್ಯಾದ 53 ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹೊಸ ಅಲೆ ವ್ಯಾಪಿಸುವ ಅಪಾಯವಿದೆ. ಈ ಪೈಕಿ ಕೆಲ ದೇಶಗಳು ಈಗಾಗಲೇ ಹೆಚ್ಚು ಹರಡುವ ಸಾಮರ್ಥ್ಯವಿರುವ ಡೆಲ್ಟಾ ಪ್ರಬೇಧದ ಹೊಸ ಅಲೆಯ ವಿರುದ್ಧ ಹೋರಾಡುತ್ತಿವೆ ಎಂದು ಹೇಳಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್ ಮುಖ್ಯಸ್ಥ ಹನ್ಸ್ ಕ್ಲೂಗ್ ಅವರು, “ಹೊಸ ಪ್ರಕರಣಗಳು ಮತ್ತು ಬೆಳವಣಿಗೆ ವೇಗ ಮತ್ತೆ ದಾಖಲೆ ಮಟ್ಟ ತಲುಪಲು ಆರಂಭವಾಗಿವೆ. ಪೌರಾತ್ಯ ಪ್ರದೇಶವಾದ ಹಿಂದಿನ ಸೋವಿಯತ್ ಒಕ್ಕೂಟದಿಂದ ಕೇಂದ್ರ ಏಷ್ಯಾವರೆಗಿನ ಪ್ರದೇಶ ತೀರಾ ಕಳವಳಕಾರಿ”. “ಸಾಂಕ್ರಾಮಿಕ ದಟ್ಟವಾಗಿ ಹರಡುವ ಇನ್ನೊಂದು ನಿರ್ಣಾಯಕ ಹಂತದಲ್ಲಿ ನಾವಿದ್ದೇವೆ. ಯೂರೋಪ್ ಈಗಾಗಲೇ ಒಂದು ವರ್ಷ ಹಿಂದೆ ಇದ್ದಂತೆ ಸಾಂಕ್ರಾಮಿಕದ ಕೇಂದ್ರಸ್ಥಾನವಾಗಿ ಮಾರ್ಪಟ್ಟಿದೆ” ಎಂದು ಹೇಳಿದ್ದಾರೆ.
ಸಾವು ಮತ್ತು ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೂರೋಪಿಯನ್ ದೇಶಗಳು ಮತ್ತಷ್ಟು ಹರಡುವಿಕೆ ತಡೆಯಲು ಕಠಿಣ ಪರಿಶ್ರಮ ವಹಿಸಬೇಕಿದೆ. ಈ ಹಿಂದಿನ ಪರಿಸ್ಥಿತಿಗೆ ಮತ್ತು ಪ್ರಸ್ತುತ ಪರಿಸ್ಥಿಗೆ ಇರುವ ವ್ಯತ್ಯಾಸವೆಂದರೆ, ಆರೋಗ್ಯ ಅಧಿಕಾರಿಗಳು ಈಗ ವೈರಸ್ ಬಗ್ಗೆ ಮತ್ತು ಅದನ್ನು ನಿಭಾಯಿಸುವ ಸಾಧನಗಳ ಬಗ್ಗೆ ಹೆಚ್ಚು ತಿಳಿದುಕೊಂಡಿ ದ್ದಾರೆ. ಕೆಲ ಪ್ರದೇಶಗಳಲ್ಲಿ ತಡೆ ಕ್ರಮಗಳನ್ನು ಸಡಿಲಿಸಿದ್ದು ಮತ್ತು ಲಸಿಕೆ ಪ್ರಮಾಣ ಏರಿಕೆಯ ಮೂಲಕ ಪ್ರಕಟವಾಗಿದೆ” ಎಂದು ಹೇಳಿದ್ದಾರೆ. ಯೂರೋಪ್ ಪ್ರದೇಶದಲ್ಲಿ ಒಂದು ವಾರದಲ್ಲಿ ಸುಮಾರು 18 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 6ರಷ್ಟು ಏರಿಕೆಯಾಗಿದ್ದು, ಸಾವಿನ ಸಂಖ್ಯೆ 24 ಸಾವಿರ ದಾಟಿದೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 12ರಷ್ಟು ಅಧಿಕ ವಾಗಿದೆ ಎಂದು ವರದಿಯಾಗಿದೆ. | |