ಒಂದು ವಾರ ಲಾಕ್ ಡೌನ್: ಏನು ಇರುತ್ತೆ, ಏನು ಇರಲ್ಲ? ಇಲ್ಲಿದೆ ಸರ್ಕಾರದ ಮಾರ್ಗಸೂಚಿ

ಬೆಂಗಳೂರು: ಕೋವಿಡ್-19 ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಬಿಬಿಎಂಪಿ,ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ  ಮಂಗಳವಾರ ರಾತ್ರಿ  8 ಗಂಟೆಯಿಂದ  ಜುಲೈ 22ರ ಬೆಳಗ್ಗೆ 5 ಗಂಟೆಯವರೆಗೂ ಏಳು ದಿನಗಳ ಅವಧಿಗೆ ಲಾಕ್ ಡೌನ್ ಜಾರಿಗೊಳಿಸಿ  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್  ಆದೇಶಿಸಿದ್ದಾರೆ.

ಆದೇಶದಲ್ಲಿ ನೀಡಲಾಗಿರುವ ಲಾಕ್ ಡೌನ್ ಮಾರ್ಗಸೂಚಿಗಳನ್ನು  ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಬೆಂಗಳೂರು ಪ್ರದೇಶದ ಲಾಕ್ ಡೌನ್ ಮಾರ್ಗಸೂಚಿಗಳು ಇಂತಿವೆ
* ಜುಲೈ 22ರ ಬೆಳಗ್ಗೆ  5 ಗಂಟೆಯವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
* ಕಂಟೈನ್ ಮೆಂಟ್ ಅಲ್ಲದ ವಲಯಗಳಲ್ಲಿ ಸರ್ಕಾರಿ ಕಚೇರಿಗಳು, ಆರೋಗ್ಯ,  ವಿದ್ಯುತ್ , ನೀರು, ವೈದ್ಯಕೀಯ ಶಿಕ್ಷಣ,ಪೊಲೀಸ್, ಸೇರಿದಂತೆ ತುರ್ತು ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ.
* ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಕಚೇರಿಗಳಲ್ಲಿ ಶೇ.50 ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸಬಹುದಾಗಿದೆ. ಕೋವಿಡ್-19 ಸಂಬಂಧಿಸಿದ ಕಾರ್ಯಾಚರಣೆಗಳಿಗಾಗಿ ನಿಯೋಜಿಸಿರುವ ಸರ್ಕಾರೇತರ
ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಇತರೆ ಎಲ್ಲ ಕಚೇರಿಗಳ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮ ಮುಂತಾದವುಗಳು ಮುಚ್ಚಿರತಕ್ಕದ್ದು
* ಕೇಂದ್ರ ಸರ್ಕಾರದ ಕಚೇರಿಗಳು, ಅದರ ಸ್ವಾಯತ್ತ ಅಧೀನ ಕಚೇರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಮುಚ್ಚಿರುತ್ತವೆ.
* ರಕ್ಷಣೆ, ಸಶಸ್ತ್ರ, ಪೊಲೀಸ್ ಪಡೆ, ದೂರ ಸಂಪರ್ಕ ಸೇವೆ ಸೇರಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಕಚೇರಿಗಳು ತೆರೆದಿರುತ್ತವೆ.
* ಅಂಚೆ ಕಚೇರಿಗಳು, ಬ್ಯಾಂಕ್ ಗಳು, ವೇತನ, ಲೆಕ್ಕಪತ್ರ, ಹಣಕಾಸು ಸಲಹೆಗಾರರು ಹಾಗೂ ಮಹಾ ಲೆಕ್ಕ ನಿಯಂತ್ರಕರ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ.
* ಎಲ್ಲಾ ಆರೋಗ್ಯ ಸೇವೆಗಳು ( ಆಯುಷ್ ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳು  ಕಾರ್ಯನಿರ್ವಹಿಸುವುದು ( ಕಂಟೈನ್ ಮೆಂಟ್ ವಲಯದ ಹೊರಗೆ)
ಎಲ್ಲ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲ್ಲ ಮಂಡಿ, ತರಕಾರಿ ಮತ್ತು ಹಣ್ಣು
ಮಾರುಕಟ್ಟೆಗಳು, ಕೃಷಿ ಯಂತ್ರೋಪಕರಣ ಮಳಿಗೆ,  ಕೀಟನಾಶಕ, ಬೀಜ ತಯಾರಿಕೆ, ವಿತರಣೆ ಮಳಿಗೆಗಳು ತೆರೆದಿರುತ್ತವೆ. ಮೀನುಗಾರಿಕೆ ಚಟುವಟಿಕೆಗಳು,
ಮೊಟ್ಟೆ ಕೇಂದ್ರಗಳು, ಕೋಳಿ, ಜಾನುವಾರ ಸಾಗಣೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣೆ, ವಿತರಣೆ ಹಾಗೂ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.

Leave a Reply

Your email address will not be published. Required fields are marked *

error: Content is protected !!