| ಮಣಿಪಾಲ, ನ. 5: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಈ ಬಾರಿ ಸುಸ್ಥಿರ ಶಕ್ತಿಯಕೌಶಲ ವೃದ್ಧಿಯ ಸಾಧನೆಗಾಗಿ ನೀಡಲಾಗುವ ಜಾಗತಿಕ ಮಟ್ಟದ ಆಶ್ಡೆನ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಲಂಡನ್ ನ ಗ್ಲಾಸ್ಗೋದಲ್ಲಿ ನಿನ್ನೆ ರಾತ್ರಿ ನಡೆದ ಸಿಒಪಿ 26 ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬಿವಿಟಿಯ ಮಾಸ್ಟರ್ ಟ್ರೆನರ್ ಆಗಿರುವ ಸುಧೀರ್ ಕುಲಕರ್ಣಿ ಅವರು ಸುದೀಪ್ತ ಘೋಷ್ ಅವರ ಜೊತೆಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯ ಮೊತ್ತವು 20 ಸಾವಿರ ಪೌಂಡ್ ಗಳನ್ನು ಒಳಗೊಂಡಿದೆ. ಇದರೊಂದಿಗೆ ಜಗತ್ತಿನ ವಿವಿಧೆಡೆ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳ ಜೊತೆಗೆ ಮಾಹಿತಿ ವಿನಿಮಯ ಮಾಡುವ ಅವಕಾಶ, ಸಹಭಾಗಿತ್ವದ ಅವಕಾಶಗಳು ಬಿವಿಟಿಗೆ ಲಭ್ಯವಾಗಲಿವೆ. ಜಗತ್ತಿನಾದ್ಯಂತ ಪರಿಸರ ಸ್ನೇಹಿ ಉಪಕ್ರಮಗಳಿಗೆ ಸಂಬಂಧಿಸಿದಂತೆ ಅನೇಕ ಉತ್ತಮ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಆದ್ದರಿಂದ ಪ್ರಶಸ್ತಿಗೆ ಉತ್ತಮವಾದ ಅನೇಕ ಪರಿಹಾರಗಳನ್ನು ಕೇಂದ್ರೀಕರಿಸಿದ ಅರ್ಜಿಗಳು ಸಲ್ಲಿಕೆಯಾಗಿದ್ದವು. ಪಾರದರ್ಶಕವಾಗಿ ಹಲವು ಸುತ್ತುಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಶ್ಡೆನ್ ಸಂಸ್ಥೆಯ ಅಧಿಕಾರಿಗಳ ತಂಡ ಸ್ವತಃ ಭೇಟಿ ನೀಡಿ, ಬಿವಿಟಿಯ ಕಾರ್ಯವೈಖರಿಯನ್ನು ವೀಕ್ಷಿಸಿ ಮೌಲ್ಯಮಾಪನ ಮಾಡಿದೆ.
ಬಿವಿಟಿಯ ಕಾರ್ಯಕ್ಷೇತ್ರವು ಹವಾಮಾನ ಬದಲಾವಣೆಯ ತೀವ್ರತೆಯನ್ನು ತಗ್ಗಿಸುವುದಷ್ಟೇ ಅಲ್ಲದೆ ಅದು ಕೈಗೆತ್ತಿಕೊಂಡ ಉಪಕ್ರಮಗಳು ಉದ್ಯೋಗ ಸೃಷ್ಟಿ ಮಾಡುತ್ತವೆ. ಪರಿಸರ ಸ್ನೇಹಿ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನರಿಗೆ ತರಬೇತಿಗಳನ್ನು ನೀಡಿ ಅವರಿಗೆ ಶಿಕ್ಷಣವನ್ನೂ ಒದಗಿಸುತ್ತವೆ. ಈ ನಿಟ್ಟಿನಲ್ಲಿ ಬಿವಿಟಿಯ ಕಾರ್ಯವೈಖರಿಗೆ ವಿಶೇಷ ಮನ್ನಣೆ ಲಭಿಸಿದೆ.
ಕಳೆದ ಎರಡು ದಶಕಗಳಲ್ಲಿ, ಸಂಸ್ಥೆಯ ವಿವಿಧ ಪಾಲುದಾರರ ಪೈಕಿ 1000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಬಿವಿಟಿ ಸೌರಶಕ್ತಿ ಕೌಶಲಗಳ ಕುರಿತು ತರಬೇತಿ ನೀಡಿದ್ದು, ಯುವಕರಿಗೆ ಉದ್ಯೋಗ ಒದಗಿಸುವ ಮತ್ತು ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿದೆ. ನೇರವಾಗಿ ಪಾಲುದಾರರಿಗೆ ತರಬೇತಿ ನೀಡಿದ್ದಲ್ಲದೆ, ಬಳಕೆದಾರರಿಗೆ ಕೂಡ ತರಬೇತಿ ನೀಡುವ ಈ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುವ ಉದ್ದೇಶ ಬಿವಿಟಿ ಹೊಂದಿದೆ. ಪ್ರಶಸ್ತಿಯಿಂದ ಬಿವಿಟಿಯ ಕೆಲಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಂತಾಗಿದೆ ಎಂದು ಬಿವಿಟಿಯ ವ್ಯವಸ್ಥಾಪಕ ಟ್ರಸ್ಟಿ, ಟಿ. ಅಶೋಕ್ ಪೈ ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನ ಬದಲಾವಣೆಯ ತೀವ್ರತೆಯನ್ನು ಕಡಿಮೆ ಮಾಡುವ ಪರಿಹಾರಗಳಿಗೆ ಸಂಬಂಧಿಸಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಆಶ್ಡೆನ್ ಸಂಸ್ಥೆಯು, ಇದೇ ಮಾದರಿಯ ಕೆಲಸಗಳನ್ನು ಮಾಡುತ್ತಿರುವ ಜಗತ್ತಿನ ವಿವಿಧೆಡೆಯ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡುತ್ತಿದೆ. ಈ ಬಾರಿಯ ಪ್ರಶಸ್ತಿಗಾಗಿ ವಿವಿಧ ದೇಶಗಳ 800ಕ್ಕೂ ಹೆಚ್ಚು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಭಾರತದ ಎರಡು ಸಂಸ್ಥೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಗಾಗಿ ಕರ್ನಾಟಕದ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಆಯ್ಕೆಯಾಗಿದೆ.
| |