ಪಡುಕರೆ: ಕಾಂಕ್ರೀಟ್ ಸ್ಲ್ಯಾಬ್ ಕುಸಿತ- ಗುತ್ತಿಗೆದಾರ, ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲು
ಕೋಟ ನ.5: ಕೋಟ ತಟ್ಟುವಿನ ಪಡುಕರೆಯಲ್ಲಿ ಕಟ್ಟಡ ಕಾಮಗಾರಿ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕಳಪೆ ಗಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿರುವುದಾಗಿ ಗುತ್ತಿಗೆದಾರ ಹಾಗೂ ಮೇಲುಸ್ತುವಾರಿ ಇಂಜಿನಿಯರ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರ ಅಶೋಕ್ ಪೂಜಾರಿ ಹಾಗೂ ಮೇಲುಸ್ತುವಾರಿ ಇಂಜಿನಿಯರ್ ಅನಂತ ಶಾಸ್ತ್ರೀಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕಟ್ಟಡ ಕಾಮಗಾರಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿರುವ ಮಂಜುನಾಥ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ನಿನ್ನೆ ಕೋಟತಟ್ಟು ಗ್ರಾಮದ ಪಡುಕೆರೆಯಲ್ಲಿರುವ ರಾಜಶೇಖರ ಹಂದೆರವರ ಮನೆಯಲ್ಲಿ ಮಂಜುನಾಥ, ಸತೀಶ, ಜೋಗಣ್ಣರವರ ಜೊತೆ ದೂರುದಾರರು ಗಾರೆ ಕೆಲಸ ಮಾಡುತ್ತಿದ್ದರು. ಈ ವೇಳೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಜುನಾಥ ಅವರು ಮನೆಯ ಶೀಟೌಟ್ ನ ಹೊರಭಾಗದಲ್ಲಿ ಸಿಮೆಂಟ್ ಮಿಕ್ಸ್ ಮಾಡಿಕೊಂಡಿರುವಾಗ ಮನೆಯ ಮೇಲೆ ಹಾಕಿದ ಸ್ಲ್ಯಾಬ್ ಕುಸಿದು ಮಂಜುನಾಥ ಅವರ ಮೇಲೆ ಬಿದ್ದಿದೆ. ಪರಿಣಾಮ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಅವಘಡಕ್ಕೆ ಗುತ್ತಿಗೆದಾರ ಅಶೋಕ್ ಪೂಜಾರಿ ಸರಿಯಾಗಿ ಕಾಮಗಾರಿ ಮಾಡದೇ ಇರುವುದು ಹಾಗೂ ಮೇಲುಸ್ತುವಾರಿ ಇಂಜಿನಿಯರ್ ಅನಂತ ಶಾಸ್ತ್ರೀಯವರ ನಿರ್ಲಕ್ಷತನವೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.