ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್ ಆಗಿ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ. 

ಪ್ರಸ್ತುತ ಮುಖ್ಯ ಕೋಚ್ ರವಿಶಾಸ್ತ್ರಿ ಅವರು 2021ರ ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಯುವುದಾಗಿ ಈಗಾಗಲೇ ಘೋಷಿಸಿದ್ದರು.

ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ದ್ರಾವಿಡ್ ಕಳೆದ ಆರು ವರ್ಷಗಳಿಂದ ಭಾರತ ಎ ಮತ್ತು ಅಂಡರ್-19 ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರ ಮೇಲ್ವಿಚಾರಣೆಯಲ್ಲಿ, ರಿಷಬ್ ಪಂತ್, ಅವೇಶ್ ಖಾನ್, ಪೃಥ್ವಿ ಶಾ, ಹನುಮ ವಿಹಾರಿ ಮತ್ತು ಶುಭಮನ್ ಗಿಲ್ ಅವರಂತಹ ಆಟಗಾರರು ಜೂನಿಯರ್ ಹಂತದಿಂದ ರಾಷ್ಟ್ರೀಯ ತಂಡಕ್ಕೆ ಪ್ರಯಾಣಿಸಿದ್ದಾರೆ. ಅವರು ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿದ್ದಾರೆ.

2021ರ ಟಿ20 ವಿಶ್ವಕಪ್ ನಂತರ, ನ್ಯೂಜಿಲೆಂಡ್ ತಂಡವು ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸಕೈಗೊಳ್ಳಲಿದೆ. ನವೆಂಬರ್ 17ರಂದು ಮೊದಲ ಟಿ20 ಪಂದ್ಯದೊಂದಿಗೆ ಪ್ರವಾಸ ಆರಂಭವಾಗಲಿದೆ. ಈ ಸರಣಿಯಿಂದಲೇ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ದ್ರಾವಿಡ್ 2023ರ ವಿಶ್ವಕಪ್ ವರೆಗೆ ಕೋಚ್ ಆಗಿ ಇರಲಿದ್ದಾರೆ
ದ್ರಾವಿಡ್ ಅವರನ್ನು 2023ರಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ವರೆಗೆ ಎರಡು ವರ್ಷಗಳ ಕಾಲ ಈ ಹುದ್ದೆಗೆ ನೇಮಿಸಲಾಗಿದೆ. ದ್ರಾವಿಡ್ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಅವರ ಮೊದಲ ಆಯ್ಕೆಯಾಗಿದ್ದು, ಅವರು ದುಬೈನಲ್ಲಿ ಅವರೊಂದಿಗೆ ಮಾತನಾಡಿ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಮನವೊಲಿಸಿದರು. ದ್ರಾವಿಡ್ ಅರ್ಜಿ ಸಲ್ಲಿಸಿದ ಬಳಿಕ ಬಿಸಿಸಿಐ ಬೇರೆ ಯಾವುದೇ ಅರ್ಜಿಯನ್ನು ಪರಿಶೀಲಿಸುವ ಅಗತ್ಯವಿರಲಿಲ್ಲ.

ಬಿಸಿಸಿಐ ಪತ್ರಿಕಾ ಪ್ರಕಟಣೆಯ ಪ್ರಕಾರ, ‘ಕ್ರಿಕೆಟ್ ಸಲಹಾ ಸಮಿತಿಯು ಬುಧವಾರ ಅವಿರೋಧವಾಗಿ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ಈ ಸಮಿತಿಯಲ್ಲಿ ಸುಲಕ್ಷಣ ನಾಯಕ್ ಮತ್ತು ಆರ್ ಪಿ ಸಿಂಗ್ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!