ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೊಯ್ಲಸ್ ಡಿಸೋಜ ಚೇತರಿಕೆ : ಚಿಕಿತ್ಸೆ ಮುಂದುವರಿಕೆ
ಉಡುಪಿ ನ.3(ಉಡುಪಿ ಟೈಮ್ಸ್ ವರದಿ): ಬೆಂಗಳೂರಿನ ತಮ್ಮ ನಿವಾಸದಲ್ಲಿ 5 ದಿನಗಳ ಹಿಂದೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೋಯ್ಲಸ್ ಡಿಸೋಜಾ ಆಸ್ಪತ್ರೆಯಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅವರ ಕಾರ್ಯದರ್ಶಿ ‘ಉಡುಪಿ ಟೈಮ್ಸ್‘ಗೆ ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಜೋಯ್ಲಸ್, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಇಂದು ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿದುಬಂದಿದೆ. ಮುಂದಿನ 2 ತಿಂಗಳುಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳೂರಿನ ಮೂಡುಬಿದಿರೆಯವರಾದ ಜೋಯ್ಲಸ್ ಡಿಸೋಜಾ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಜನವರಿಯಲ್ಲಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಚಿವರಾದ ಅಶ್ವತ್ಥನಾರಾಯಣ್, ಸುಧಾಕರ್, ಕೋಟ ಶ್ರೀನಿವಾಸ್ ಪೂಜಾರಿ ಸಹಿತ ಹಲವು ಸಚಿವರು, ಪ್ರಮುಖರಾದ ನಳಿನ್ ಕುಮಾರ್ ಕಟೀಲ್, ಐವನ್ ಡಿಸೋಜಾ, ಕೆ ಜೆ ಜಾರ್ಜ್, ಜೆ.ಆರ್. ಲೋಬೊ, ಮಂಗಳೂರು ಬಿಷಪ್ ಪೀಟರ್ ಪೌಲ್ ಡಿಸೋಜಾ ದೂರವಾಣಿ ಮೂಲಕ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದು ಆರೋಗ್ಯ ವಿಚಾರಿಸಿದ್ದಾರೆ.
ಜೋಯ್ಲಸ್ ಡಿಸೋಜಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯದ ಹಿತದೃಷ್ಟಿಯಿಂದ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡದೆ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುವಂತೆ ಕುಟುಂಬ ಸದಸ್ಯರು ‘ಉಡುಪಿ ಟೈಮ್ಸ್‘ ಮಾಧ್ಯಮದ ಮೂಲಕ ವಿನಂತಿಸಿದ್ದಾರೆ.