| ಉಡುಪಿ ನ.2(ಉಡುಪಿ ಟೈಮ್ಸ್ ವರದಿ): ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಸೇವಾ ಸಂಕಲ್ಪದ ಅಂಗವಾಗಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ. 2022ರ ಒಳಗೆ ಉಡುಪಿ ನಗರ 100 ಶೇಕಡಾ ವಿದ್ಯುತ್ ಹೊಂದಿದ ದೇಶದ ಪ್ರಪ್ರಥಮ ನಗರ ಆಗುವಂತೆ ಆಸರೆ ಚಾರಿಟೇಬಲ್ ಟ್ರಸ್ಟ್ ಸತತ ಪ್ರಯತ್ನ ಮಾಡುತ್ತಿದೆ.
ಈ ಕಾರ್ಯಸಾಧನೆಗೆ ಟ್ರಸ್ಟ್ ನ ಮೂಲಕ ಉಡುಪಿ ನಗರದ ಬಡವರ, ದೀನ ದಲಿತರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಇದೀಗ ಟ್ರಸ್ಟ್‍ನ ವತಿಯಿಂದ 100 ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ಇದೇ ಬುಧವಾರ ನಡೆಯಲಿದೆ. ಈ ನಿಟ್ಟಿನಲ್ಲಿ ನ.3 ರಂದು ದೀಪಾವಳಿ ಹಬ್ಬದಂದು ಉಡುಪಿ ಪುತ್ತೂರು, ಕೊಡವೂರು ಇಂದ್ರಾಳಿ, ಮಂಚಿ ಕುಮೇರಿ ಸಹಿತ 6 ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.
ಈ ಕಾರ್ಯಕ್ರಮವನ್ನು ಇಂದ್ರಾಳಿ ಮಂಚಿ ಕುಮೇರಿಯ ಕೊರಗ ಸಮುದಾಯ ಭವನದ ಬಳಿ ಕರ್ನಾಟಕ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ವಿ ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಪ. ವಸಂತ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಕ್ಷೇತ್ರದ ಶಾಸಕ ಕೆ ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಜಾನಪದ ವಿದ್ವಾಂಸರಾದ 2021ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬನ್ನಂಜೆ ಬಾಬು ಅಮೀನ್, ಮತ್ತು ಸ್ಥಳೀಯ ನಗರಸಭಾ ಸದಸ್ಯರುಗಳಾದ ಅಶೋಕ್ ನಾಯ್ಕ್, ವಿಜಯ್ ಕೊಡವೂರು, ಜಯಂತಿ ಪೂಜಾರಿ ಉಪಸ್ಥಿತರಿರಲಿದ್ದಾರೆ ಎಂದು ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ರಾಘವೇಂದ್ರ ಕಿಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಸರೆ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಶೈಕ್ಷಣಿಕ ನಿಧಿ ಸ್ಥಾಪಿಸಿ 25 ತಂದೆ ಮತ್ತು ತಾಯಿ ಕಳಕೊಂಡ ಅವಕಾಶ ವಂಚಿತ ಮಕ್ಕಳ ಶೈಕ್ಷಣಿಕ ಸಹಕಾರ, ಮೊದಲ ಕೋವಿಡ್ ಸಂದರ್ಭದಲ್ಲಿ ಸತತ 60 ದಿನಗಳ ಕಾಲ ನಿರ್ಗತಿಕರಿಗೆ, ಕೂಲಿ ಕಾರ್ಮಿಕರನ್ನು ಸೇರಿ 96,000 ಮಂದಿಗೆ ಅನ್ನದಾನ, ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಣೆ, ಅಂಗನವಾಡಿ ಕಾರ್ಯಕರ್ತರಿಗೆ ತಲಾ 2,000 ರೂ. ಧನಸಹಾಯ ನೀಡುವ ಮೂಲಕ ಸಮಾಜ ಮುಖಿ ಕಾರ್ಯಮಾಡಿದೆ. ಇಷ್ಟೇ ಅಲ್ಲದೆ ಉಡುಪಿ ನಗರದಲ್ಲಿ ಪ್ರಯಾಣಿಕರಿಗೆ ಉಚಿತ 12 ಬಸ್ಸು, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆಗಳ ದುರಸ್ತಿಗೆ ಸಹಕಾರ, ನೂರಾರು ಮಂದಿಗೆ ಆರೋಗ್ಯ ನಿಧಿ ಮತ್ತು ನಿರಂತರ ಸಾಮಾಜಿಕ ಚಟುವಟಿಕೆ ನಡೆಸಿಕೊಂಡು ಉಡುಪಿ ನಗರದ ವಿದ್ಯುತ್ ಇಲ್ಲದ ಎಲ್ಲಾ ಬಡವರ ಮನೆಗಳನ್ನು ಸಂಪರ್ಕಿಸಿ ಉಚಿತ ವಿದ್ಯುತ್ ಸಂಪರ್ಕ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ.
| |