ಕೋವಿಡ್: ದ.ಕ. ಜಿಲ್ಲೆಯಲ್ಲಿ 3500 ಹಾಸಿಗೆ ಸಿದ್ಧ

ಮಂಗಳೂರು ಜುಲೈ 13: ಕೋರೋನಾ ಸೋಂಕಿತರಿಗೆ ಹಾಗೂ ರೋಗಲಕ್ಷಣ ಹೊಂದಿದವರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಆಸ್ಪತ್ರೆ ಹಾಗೂ ಕೇರ್ ಸೆಂಟರ್‍ಗಳಲ್ಲಿ 3500 ಬೆಡ್‍ಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್ ತಿಳಿಸಿದ್ದಾರೆ.


 ಅವರು ಸೋಮವಾರ ಮುಖ್ಯಮಂತ್ರಿಗಳೊಂದಿಗೆ ನಡೆದ ವೀಡಿಯೋ ಕಾನ್ಪೆರೆನ್ಸ್‍ನಲ್ಲಿ ಈ ಮಾಹಿತಿ ನೀಡುತ್ತಾ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 10000 ಹಾಸಿಗೆಗಳನ್ನು ಸಿದ್ಧಪಡಿಸುವ ಸಾಮಥ್ರ್ಯ ಇದೆ. ಮುಂದಿನ ಒಂದು ವಾರದೊಳಗೆ ಇದು ಸಿದ್ಧಗೊಳ್ಳಲಿದೆ. ಇದಕ್ಕಾಗಿ ಜಿಲ್ಲೆಯ ವಿವಿಧ ಹಾಸ್ಟೆಲ್, ಸಭಾಂಗಣ, ಆಸ್ಪತ್ರೆಗಳಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.


ಇದುವರೆಗೆ ಜಿಲ್ಲೆಯಲ್ಲಿ 36898 ಮಂದಿಯನ್ನು ಪರೀಕ್ಷಿಸಲಾಗಿದ್ದು, ಆ ಪೈಕಿ 2222 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸಕ್ತ ಜಿಲ್ಲೆಯಲ್ಲಿ 1399 ಸಕ್ರಿಯ ಪ್ರಕರಣಗಳಿವೆ. 43 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದರು.


 ಪ್ರಸಕ್ತ ಕೆಲವೊಂದು ಪ್ರದೇಶಗಳಲ್ಲಿ ಮನೆಮನೆ ಸಮೀಕ್ಷೆ ನಡೆಸಿ ರೋಗಲಕ್ಷಣಗಳನ್ನು ಪತ್ತೆಹಚ್ಚಲಾಗುತ್ತಿದೆ. ಕೆಲವೊಂದು ರೋಗಿಗಳ ಪ್ರಕರಣಗಳಲ್ಲಿ, ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಿರುವುದರಿಂದ ಅಂತಹ ಪ್ರಕರಣಗಳು ಕ್ಲಿಷ್ಟವಾಗುತ್ತಿವೆ ಎಂದರು.
 ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಾ, ಖಾಸಗೀ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡುವ ಬಗ್ಗೆ ಸಮರ್ಪಕ ಮಾರ್ಗದರ್ಶನ ಹೊರಡಿಸುವಂತೆ ಕೋರಿದರು.


ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೊರೋನಾ ಸೋಂಕಿತರಿಗೆ ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಡಿಸಿಪಿ ಅರುಣಾಂಶ ಗಿರಿ, ಅಪರ ಜಿಲ್ಲಾಧಿಕಾರಿ ರೂಪಾ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!