ಜಿಮ್ ಮತ್ತು ಫಿಟ್ನೆಸ್ ಸೆಂಟರ್’ಗೆ ಶೀಘ್ರವೇ ಮಾರ್ಗಸೂಚಿ- ಆರೋಗ್ಯ ಸಚಿವ ಸುಧಾಕರ್
ಚಿಕ್ಕಬಳ್ಳಾಪುರ, ನ.1: ಜಿಮ್ ಮತ್ತು ಫಿಟ್ನೆಸ್ ಸೆಂಟರ್‌ಗಳಲ್ಲಿ ಮಾರ್ಗಸೂಚಿ ತರುವ ಕುರಿತು ಖ್ಯಾತ ಹೃದಯ ತಜ್ಞರೊಂದಿಗೆ ಚರ್ಚಿಸಿ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಹೃದಯಾಘಾತದಿಂದ ನಟ ಪುನೀತ್ ರಾಜಕುಮಾರ್ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಮ್‌ಗಳಿಗೆ ಮಾರ್ಗಸೂಚಿ ತರುವ ಬಗ್ಗೆ ಚರ್ಚಿಸಲಾಗುತ್ತಿದೆ. ಈ ವಿಚಾರವಾಗಿ ಮಾತನಾಡಿದ ಅವರು, ಆರೋಗ್ಯದ ಆಧಾರವಾಗಿ ವ್ಯಾಯಾಮ ಮಾಡಬೇಕಾಗುತ್ತದೆ. ಜಿಮ್‌ನಿಂದ ಸಮಸ್ಯೆಯಾಗುತ್ತದೆ ಎಂಬ ತಪ್ಪು ಎಂಬ ಭಾವನೆ ಬೇಡ. ಜಿಮ್, ಯೋಗ, ಕ್ರೀಡೆಯಿಂದ ಯಾವುದೇ ಅಪಾಯ ಇಲ್ಲ. ಕೆಲವರಲ್ಲಿ ಮಾತ್ರ ಏಕೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಅಧ್ಯಯನ ಮಾಡಲಾಗುತ್ತಿದೆ. ಕೆಲವರು ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ನಂತರ ಜಿಮ್ ಮಾಡಬೇಕಾಗುತ್ತದೆ. ಜಿಮ್ ನಿಂದಲೇ ಹೃದಯ ತೊಂದರೆ ಬರುತ್ತದೆ ಎಂಬುದು ಸುಳ್ಳು ಸುದ್ದಿ ಎಂದು ತಿಳಿಸಿದರು.
ಕೆಲವರಿಗೆ ಅನುವಂಶೀಯವಾಗಿ ಹೃದಯ ಸಮಸ್ಯೆ ಇರುತ್ತದೆ. ಅಂತಹವರು ಎಚ್ಚರದಿಂದ ಇರಬೇಕು. ಜಿಮ್, ಯೋಗ ಕೇಂದ್ರದಲ್ಲಿ ಸಮಸ್ಯೆಯಾದರೆ ಸಿಪಿಆರ್ ಮೊದಲಾದ ತುರ್ತು ಚಿಕಿತ್ಸೆ ವ್ಯವಸ್ಥೆ ಲಭ್ಯವಿರಬೇಕಾಗುತ್ತದೆ. ಇದಕ್ಕಾಗಿ ಮಾರ್ಗಸೂಚಿ ರೂಪಿಸುತ್ತಿದ್ದು, ಅದು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದರು. ಇನ್ನು ತಾನೂ ಕೂಡ 20 ವರ್ಷದಿಂದ ಜಿಮ್‌ಗೆ ಹೋಗುತ್ತಿರುವುದಾಗಿ ತಿಳಿಸಿದ ಅವರು. ವಯಸ್ಸು, ಆರೋಗ್ಯದ ಆಧಾರವಾಗಿ ವ್ಯಾಯಾಮ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದರು.