ಗ್ಯಾಸ್ ಬೆಲೆ ಏರಿಕೆಯೊಂದಿಗೆ ಮೋದಿ ಸರಕಾರದ ದೀಪಾವಳಿ ಗಿಫ್ಟ್- ರಮೇಶ್ ಕಾಂಚನ್ ವ್ಯಂಗ್ಯ
ಉಡುಪಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ತೈಲ ಬೆಲೆ ಜೊತೆಗೆ ಅಡುಗೆ ಅನಿಲದ ದರವನ್ನು ಮತ್ತೆ ಮತ್ತೆ ಏರಿಸುತ್ತಿರುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿಯೊಂದು ಮನೆಯಲ್ಲಿಯೂ ಅಡುಗೆಗಾಗಿ ಮಹಿಳೆಯರು ಎಲ್‌ಪಿಜಿ ಬಳಸುವುದು ಅನಿವಾರ್ಯವಾಗಿರುವುದರಿಂದ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಅಡುಗೆ ಅನಿಲ ದರ ಏರಿಸಲಾಗುತ್ತಿದೆ. ಆ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆಯ ಗಿಫ್ಟ್ ನೀಡಿದೆ ಎಂದು ರಮೇಶ್ ಕಾಂಚನ್ ವ್ಯಂಗ್ಯವಾಡಿದ್ದಾರೆ.
ಹೊಟೇಲುಗಳಲ್ಲಿ ಬಳಸುವ ಕುಕ್ಕಿಂಗ್ ಗ್ಯಾಸ್ (ಕಮರ್ಷಿಯಲ್) ಬೆಲೆಯನ್ನೂ ಇದೀಗ ಸಿಲಿಂಡರಿಗೆ 160ರಷ್ಟು ಏರಿಕೆ ಮಾಡಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ರೂ. 2000 ದಾಟಿದೆ. ಇದರಿಂದ ಹೊಟೇಲ್ ಉದ್ಯಮವೂ ಸಂಕಷ್ಟಕ್ಕೊಳಗಾಗಲಿದ್ದು, ತಿಂಡಿ ತಿನಿಸುಗಳ ಬೆಲೆ ಏರಿಕೆಯಾಗಲಿದೆ. ಅಚ್ಚೇ ದಿನ್ ನೀಡುವ ಭರವಸೆ ನೀಡಿದ ಸರಕಾರದ ಜನ ವಿರೋಧಿ ಆರ್ಥಿಕ ನೀತಿಯಿಂದಾಗಿ ಲಾಕ್ ಡೌನ್‌ನಿಂದ ತೊದರೆಗೆ ಸಿಲುಕಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದ ಅವರು, ಈ ಕೂಡಲೇ ಗ್ಯಾಸ್ ಸಿಲಿಂಡರ್ ಮೇಲಿನ ತೆರಿಗೆ ಕಡಿತ ಮಾಡಿ ಬೆಲೆ ಇಳಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.