ಅನಿವಾಸಿ ಕನ್ನಡಿಗ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ‌ಯವರಿಗೆ ಕರ್ನಾಟಕ ರಾಜ್ಯೋತ್ಸವ ಗರಿ

ಉಡುಪಿ ಅ.31: 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅನಿವಾಸಿ ಕನ್ನಡಿಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ‌ ಅವರು ಭಾಜನರಾಗಿದ್ದಾರೆ.

ದುಬೈನ ಪ್ರಸಿದ್ಧ ಉದ್ಯಮಿಯಾಗಿರುವ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ನ ಚೇರ್ಮನ್ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಹೊರನಾಡ ಸಾಧಕರ ವಿಭಾಗದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರುಕಳೆದ 30 ವರ್ಷದಿಂದ ದುಬೈನಲ್ಲಿ ಉದ್ಯಮ ಸ್ಥಾಪಿಸಿ ಹೊರನಾಡು ಕನ್ನಡಿಗನಾಗಿದ್ದು ಕನ್ನಡಿಗರಿಗೆ ಅಗತ್ಯ ಸಹಾಯ ಮಾಡುತ್ತಿರುವೆ. ಕೊರೋನಾ ಕಾಲದಲ್ಲಿ‌ ಕನ್ನಡಿಗರಿಗಾಗಿ ಮಾಡಿದ ಜನ ಸೇವೆಯನ್ನು ರಾಜ್ಯ ಸರಕಾರ ಗುರುತಿಸಿ ಈ ಗೌರವ ನೀಡಿದ್ದು ಸಂತಸ ನೀಡಿದೆ. ಪ್ರಶಸ್ತಿ ಮೂಲಕ ಇನ್ನಷ್ಟು ಜವಬ್ದಾರಿ ಕೂಡ ಹೆಚ್ಚಿದ್ದು ಹಿಂದಿನಂತೆಯೇ ಮುಂದಿನ ದಿನಗಳಲ್ಲಿಯೂ ನನ್ನ ಸಮಾಜಸೇವೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಪ್ರವೀಣ್ ಕುಮಾರ್ ಶೆಟ್ಟಿ ಅವರು 1967 ಜುಲೈ 6 ರಂದು ಜನಿಸಿದ್ದು, ಸರ್ಕಾರಿ ಜೂನಿಯರ್ ಕಾಲೇಜು ಕೋಟೇಶ್ವರ ಮತ್ತು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಹೋಟೆಲ್ ವೃತ್ತಿಯಲ್ಲಿ ಬಗ್ಗೆ ಆಸಕ್ತಿ ಹೊಂದಿದ್ದ ಇವರು ದುಬೈಗೆ ತೆರಳಿ ಅಲ್ಲಿ ತನ್ನದೇ ಆದ ಸಂಸ್ಥೆ ಸ್ಥಾಪಿಸಿದರು. ಪ್ರಸ್ತುತ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮೂಲಕ ದುಬೈನಲ್ಲಿ ಆರು, ಭಾರತದಲ್ಲಿ 2, ಜಾರ್ಜಿಯಾದಲ್ಲಿ ಒಂದು ಹೋಟೆಲನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೆ ಇವರು ಯುಎಇ ಎನ್.ಆರ್.ಐ ಫೋರಂನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ.

ವಿದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಉದ್ಯಮಿ ಎರಡು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ಪೈಕಿ ಶೇಕಡ 60ಕ್ಕೂ ಅಧಿಕ ಮಂದಿ ಕನ್ನಡಿಗರು ಕೆಲಸ ಪಡೆದಿದ್ದಾರೆ ಅನ್ನುವುದು ಹೆಮ್ಮೆಯ ವಿಚಾರ. ಇವರು ಹಲವಾರು ಸಾಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ದು, ಕೋವಿಡ್ ವೇಳೆ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡುವ ಮೂಲಕ ಕನ್ನಡಿಗರನ್ನು ತಾಯ್ನಾಡಿಗೆ ಕಳಿಸುವ ಮೂಲಕ ಸುದ್ದಿಯಾಗಿದ್ದರು. ಈ ಬಾರಿ ಕೊರೋನಾ ಸಂದರ್ಭ ತನ್ನ ಹುಟ್ಟೂರಾದ ವಕ್ವಾಡಿ ಭಾಗದ ನೂರಾರು ಮನೆಗೆ ಆಹಾರ ಸಾಮಾಗ್ರಿ ಕಿಟ್ ನೀಡಿದ್ದರು.

ಈಗಾಗಲೇ ಇವರ ಸಾಧನೆ ಹಾಗೂ ಸಮಾಜಮುಖಿ ಸೇವೆ ಗಳಿಗೆ ಇವರನ್ನು ಅನೇಕ ಪ್ರಶಸ್ತಿ ಗಳು ಅರಸಿ ಬಂದಿದ್ದು, ಅವುಗಳಲ್ಲಿ 2009ರಲ್ಲಿ ಕುವೆಂಪು ವಿಶ್ವಮಾನವ ಪ್ರಶಸ್ತಿ, 2015 ರಲ್ಲಿ ಶಾರ್ಜಾದ ಮಯೂರ ಪ್ರಶಸ್ತಿ, 2016 ರಲ್ಲಿ ಕೇರಳದ ಶ್ರೇಯಸ್ ಅವಾರ್ಡ್, 2017 ರಲ್ಲಿ ಕಿರೀಟ ಪ್ರಶಸ್ತಿ ಹಾಗೂ ಬಹರೈನ್ ಕನ್ನಡ ಸಂಘ ಪ್ರಶಸ್ತಿ, 2018 ರಲ್ಲಿ  ಇಂಟರ್ನ್ಯಾಷನಲ್ ಪೀಸ್ ಅವರ್ಡ್,2019 ರಲ್ಲಿ ಬಿಎಸ್ ಯಡಿಯೂರಪ್ಪ ಅವರಿಂದ ಬಂಟರ ಸಂಘದ ಪ್ರಶಸ್ತಿ,2021ರಲ್ಲಿ ಆರ್ಯಭಟ ಪ್ರಶಸ್ತಿ ಹಾಗೂ ಜಾರ್ಜಿಯಾ ಅವಾರ್ಡ್, ಬಹರೈನ್ ನಲ್ಲಿ ಸಕ್ಸಸ್ ಫುಲ್ ಎಂಟರ್ಪ್ರಿನರ್ ಆಫ್ ದ ಇಯರ್ ಅವಾರ್ಡ್,ವರ್ಲ್ಡ್ ಹ್ಯೂಮಾನಿಟೇರಿಯನ್ ಅವರ್ಡ್, ಕ್ರೌನ್ ಅವಾರ್ಡ್, ಕುಂದಾಪುರ ಕನ್ನಡ ಬಿಸಿನೆಸ್ ರತ್ನ ಪ್ರಶಸ್ತಿ, ಓವರ್‌ಸಿಸ್ ಅಂಬಾಸಿಡರ್ ಆಫ್ ಇಂಡಿಯಾ ಅವಾರ್ಡ್, ಸೌತ್ ಇಂಡಿಯಾ ಟ್ರಾವೆಲ್ ಅವಾರ್ಡ್, ಹೈದರಾಬಾದ್, ಸಹಿತ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!